ಹೈಕಮಾಂಡ್‌ ಗ್ರೀನ್‌ ಸಿಗ್ನಲ್ ಸಿಕ್ಕಿದಾಕ್ಷನ ಸಚಿವ ಸಂಪುಟ ರಚನೆ: ಬಸವರಾಜ್‌ ಬೊಮ್ಮಾಯಿ

ನವದೆಹಲಿ,ಜು.31: ಸಚಿವ ಸಂಪುಟ ರಚನೆ ಕುರಿತಂತೆ ಹೈಕಮಾಂಡ್ ನಾಯಕರ ಸೂಚನೆಗಾಗಿ ಕಾಯುತ್ತಿದ್ದೇನೆ. ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಸಚಿವ ಸಂಪುಟ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಷಣದವರೆಗೂ ನಾನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ಜೊತೆ ಚರ್ಚೆಯನ್ನೇ ಮಾಡಿಲ್ಲ. ನನಗೆ ಹೈಕಮಾಂಡ್ ನಿಂದ ಇನ್ನೂ ಕರೆ ಬಂದಿಲ್ಲ. ಬಂದ ಕೂಡಲೇ ಪಟ್ಟಿ ಬಗ್ಗೆ ಚರ್ಚೆ ಮಾಡುವೆ. ಅವರು ಏನು ಸೂಚನೆ ಕೊಡುತ್ತಾರೆ ಎಂಬುದನ್ನು ಎದುರು ನೋಡುತ್ತಿದ್ದೇನೆ. ನಂತರ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಇಂದು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಸಚಿವರ ಪಟ್ಟಿ ಸಿಗುತ್ತದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಊಹಾಪೋಹ ಪ್ರಶ್ನೆಗಳಿಗೆ ನಾನು ಉತ್ತರವನ್ನೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಆಯಾ ಜಿಲ್ಲಾಧಿಕಾರಿಗಳ ಜೊತೆ ಈಗಾಗಲೇ ಚರ್ಚೆ ಮಾಡಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಡಿಸಿಗಳ ಖಾತೆಯಲ್ಲಿರುವ ಹಣವನ್ನು ಬಳಸಿ ನೆರವು ಕಾರ್ಯಾಚರಣೆ ಮಾಡಬೇಕು ಎಂದು ತಿಳಿಸಲಾಗಿದೆ ಎಂದರು.

ಕೇರಳದಲ್ಲಿ ಕೋವಿಡ್ ಹೆಚ್ಚಿದೆ. ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದ್ದು, ಕೋವಿಡ್‍ಗೆ ಸಂಬಂಧಿಸಿದ ಎಲ್ಲ ಔಷಧಿಗಳನ್ನು ಸಂಗ್ರಹಣೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು. ನವದೆಹಲಿಯಿಂದ ಬೆಂಗಳೂರಿಗೆ ಹಿಂತಿರುಗಿದ ನಂತರ ನಾಳೆ ಸಂಜೆ ಗೃಹಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ಕೋವಿಡ್ ಮತ್ತು ಪ್ರವಾಹ ಸಂಬಂಧ ಚರ್ಚಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿ ಮಾಡಿ ರಾಜ್ಯಕ್ಕೆ ಬರಬೇಕಿರುವ ಅನುದಾನ ಬಿಡುಗಡೆ ಬಗ್ಗೆ ಚರ್ಚಿಸಿರುವುದಾಗಿ ಸಿಎಂ ಹೇಳಿದರು.

Exit mobile version