ಸಂವಿಧಾನಕ್ಕೆ ಬೆಲೆ ಕೊಡದ ಮತಾಂಧರ ಗಮನಕ್ಕೆ: ಮಾಜಿ ಸಚಿವ ಎಚ್‌.ಸಿ‌.ಮಹದೇವಪ್ಪ

ಮೈಸೂರು, ಫೆ 18: ಭಾರತದ ಸಂವಿಧಾನಾತ್ಮಕ ಸ್ವರೂಪವನ್ನು ಅರ್ಥ ಮಾಡಿಕೊಂಡವರಿಗೆ ದೇಶವೊಂದರ ಧಾರ್ಮಿಕ ವಾತಾವರಣವು ಸುಲಭವಾಗಿ ಅರ್ಥವಾಗುತ್ತದೆ. ಈ ಹಿನ್ನಲೆಯಲ್ಲಿ ಧಾರ್ಮಿಕವಾಗಿ ಮಂದಿರ ಮಸೀದಿ ಎಂದು ಹೇಳುತ್ತಾ ದೇಶದ ಒಳಗೆ ಮತ್ತೊಮ್ಮೆ ಜನರ ಬದುಕಿನ ದಿಕ್ಕು ತಪ್ಪಿಸುವ ಕೆಲಸಗಳು ನಡೆಯುತ್ತಿವೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬಾಬಾ ಸಾಹೇಬರು ಬಹಳ ಹಿಂದೆಯೇ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದ ಮತ್ತು ದೇವರಿದ್ದಾನೆಂದು ಹೇಳುವ ದೇವಾಲಯದ ಒಳಗೇ ಜಾತಿ ಧರ್ಮದ ತಾರತಮ್ಯದ ಆಧಾರದಲ್ಲಿ ಮನುಷ್ಯರನ್ನು ಒಳಗೆ ಬಿಟ್ಟುಕೊಳ್ಳದ ಧರ್ಮವು ಧರ್ಮವೇ ಅಲ್ಲ ಎಂದು ಹೇಳಿದ್ದರು.

ಬಹುಶಃ ಬಾಬಾ ಸಾಹೇಬರು ಅಂದು ಹೇಳಿದ ಮಾತು ಈಗಲೂ ಚಾಲ್ತಿಯಲ್ಲಿದ್ದು ಮಂದಿರಕ್ಕಾಗಲೀ ಮಸೀದಿಗಾಗಲೀ ಅದನ್ನು ತೊಡೆದು ಹಾಕುವ ಶಕ್ತಿಯೇ ಇಲ್ಲ. ಇನ್ನು ಕರೋನಾ ಲಾಕ್ ಡೌನ್ ಸಂದರ್ಭದಲ್ಲಿಯೇ ಜನರ ಸಂಕಷ್ಟಗಳನ್ನು ಬಗೆ ಹರಿಸುತ್ತವೆ ಎಂದು ನಂಬಲಾಗಿದ್ದ ಎಲ್ಲಾ ಧಾರ್ಮಿಕ ಕೇಂದ್ರಗಳು ಮುಚ್ಚಿದ್ದವು.

ತಮಾಷೆಯೆಂದರೆ ಧಾರ್ಮಿಕ ಕೇಂದ್ರಗಳು ತೆರೆದ ನಂತರವೂ ಸಹ ಅಲ್ಲಿ ಔಷಧಿ ಸಿಂಪಡಣೆಯನ್ನು ಮಾಡಲಾಗುತ್ತಿತ್ತು. ಇಷ್ಟೆಲ್ಲಾ ಆದ ಮೇಲೂ ಸಹ ಈ ಮತಾಂಧರಿಗೆ ಬುದ್ದಿ ಬಂದಿಲ್ಲವಲ್ಲ ಎಂದು ನೆನೆದರೆ ನಿಜಕ್ಕೂ ನನಗೆ ಸಿಟ್ಟು ಬರುತ್ತದೆ.
ಇದನ್ನು ಹೇಳುವುದಕ್ಕೆ ಕಾರಣ, ನಾವು ಬಯಸಿದ ಧಾರ್ಮಿಕ ಆಚರಣೆಯ ಹಕ್ಕನ್ನು ರೂಢಿಸಿಕೊಂಡ ಹೊತ್ತಿನಲ್ಲೇ ವೈಚಾರಿಕತೆ ಮತ್ತು ವೈಜ್ಞಾನಿಕ ನೆಲೆಯಲ್ಲಿ ನಮ್ಮ ನಂಬಿಕೆಗಳು ಇರಬೇಕು ಎಂಬುದಾಗಿದೆ.
ಇನ್ನು ಮಂಡಲ್ ಕಮಿಷನ್ ಜಾರಿಯಾಗುವಾಗ ಕಮಂಡಲವನ್ನು ಹಿಡಿದು ರಥಯಾತ್ರೆ ಮಾಡಿದ್ದ ಅಡ್ವಾಣಿಯವರು ಸಾಮಾಜಿಕ ನ್ಯಾಯದ ಸಂಗತಿಯನ್ನೇ ಸಂಪೂರ್ಣವಾಗಿ ಬದಿಗೊತ್ತಿ ಧರ್ಮದ ಹೆಸರಿನಲ್ಲಿ ಜನ ಸಾಮಾನ್ಯರ ಶಾಂತಿ ಮತ್ತು ಸಮಾಜದ ಸೌಹಾರ್ದತೆಯನ್ನು ಕೆಡಿಸುವ ಕೆಲಸವನ್ನು ಮಾಡಿದ್ದರು. ಆ ಸಂದರ್ಭದಲ್ಲಿ ಮಂದಿರ ನಿರ್ಮಾಣಕ್ಕಾಗಿ ಅವರು ಇಟ್ಟಿಗೆ ಮತ್ತು ದೇಣಿಗೆಯನ್ನು ಪಡೆದುಕೊಂಡಿದ್ದರು. ಇದೆಲ್ಲಾ ಎಲ್ಲಿ ಹೋಯಿತು ಎಂಬುದು ತಿಳಿದಿಲ್ಲ.

ಸರಿಯಾಗಿ ಗಮನಿಸಿದರೆ ಈಗಲೂ ಕೂಡಾ ಅಂತಹದ್ದೇ ಕೆಲಸವು ನಡೆಯುತ್ತಿದ್ದು ಇವೆಲ್ಲವೂ ದೇಶವೊಂದರ ಅಭಿವೃದ್ಧಿಗೆ ಕಂಟಕವಾಗಿವೆ.
ಪ್ರಸ್ತುತ ಸಂದರ್ಭದಲ್ಲಿ ರಾಮ ಮಂದಿರದ ನೆಪದಲ್ಲಿ ಮತ್ತೊಮ್ಮೆ ಧಾರ್ಮಿಕವಾದ ವಾತಾವರಣವು ಮುನ್ನಲೆಗೆ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದ ಬಳಿಕ ವಿವಾದಾತ್ಮಕ ಸ್ಥಳದಲ್ಲೇ ಮಂದಿರ ಕಟ್ಟಲು ಅವಕಾಶ ದೊರೆತು ಬಹುತೇಕ ಒಂದು ವರ್ಷ ಸಾಗುತ್ತಾ ಬಂದಿದೆ.

ರಾಮ ಜನ್ಮಭೂಮಿಯಲ್ಲೇ ರಾಮ ಮಂದಿರ ಕಟ್ಟಬೇಕೆಂಬ ಹಲವರ ಧಾರ್ಮಿಕ ಉತ್ಸಾಹದ ನಡುವೆ ರಾಮನ ಕಾಲದಲ್ಲಿ ಇತ್ತು ಎಂದು ಹೇಳುವಂತಹ ರಾಮ ರಾಜ್ಯವೇ ಮಾಯವಾಗಿದೆ. ಇವರೇ ಹೇಳುವಂತೆ ರಾಮ ರಾಜ್ಯವು ಸುಖೀರಾಜ್ಯವಾಗಿತ್ತು. ಅಲ್ಲಿ ಪ್ರಜೆಗಳೆಲ್ಲರೂ ಶ್ರೀರಾಮಚಂದ್ರನ ಕೃಪೆಯಿಂದ ಸಮೃದ್ಧ ಜೀವನ ನಡೆಸುತ್ತಿದ್ದರಂತೆ. ಇದೇ ವಾದವನ್ನು ಒಂದು ಕ್ಷಣ ನಂಬುವುದಾದರೆ ಇಂದು ಅಂತಹ ಸುಖೀ ರಾಜ್ಯದ ಸನ್ನಿವೇಶವೇ ದೇಶದಲ್ಲಿ ಇಲ್ಲ.
ಈ ದಿನ ಪೆಟ್ರೋಲ್ ಬೆಲೆ 100 ರೂಪಾಯಿ, ಡೀಸೆಲ್ ಬೆಲೆ 80 ರೂಪಾಯಿ, ಅಡುಗೆ ಅನಿಲದ ಬೆಲೆ 800 ರೂಪಾಯಿ ಇದ್ದು ದಿನ ಬಳಕೆಯ ವಸ್ತುಗಳ ಬೆಲೆಯು ಗಗನಕ್ಕೆ ಏರಿದೆ. ದೇಶದ ಆರ್ಥಿಕತೆಯು ಪಾತಾಳಕ್ಕೆ ಕುಸಿದಿದ್ದು ಸಾಮಾನ್ಯ ಜನರ ಬದುಕು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ.

ಇಷ್ಟು ಸಾಲದು ಎಂಬಂತೆ ರಾಮನ ಹೆಸರೇಳುವ ಕೋಮುವಾದಿ ಪಾಳಯದಿಂದ ಬಂದಿರುವ ಜನ ಪ್ರತಿನಿಧಿಗಳು ಬರೀ ಸುಳ್ಳನ್ನೇ ಹೇಳುತ್ತಿದ್ದು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಹೊರತಾಗಿಲ್ಲ. ಹೀಗಿರುವಾಗ ಇಂತವರಿಂದ ಆಗಾಗ ಪ್ರಸ್ತಾಪವಾಗುವ ಮರ್ಯಾದಾ ಪುರುಷ ಎನಿಸಿಕೊಂಡ ರಾಮನಿಗಾಗಲೀ, ಸತ್ಯಸಂಧತೆಯನ್ನೇ ನಂಬುವ ಹಿಂದೂ ಧರ್ಮಕ್ಕೆ ಇವರಿಂದ ಖಂಡಿತಾ ಗೌರವ ಬರುವುದಿಲ್ಲ.
ಇನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿರುವ ಸಂಗತಿಯೆಂದರೆ ಈ ದೇಶದ ಪರಮೋಚ್ಚ ಸಂಗತಿ ಅದು ಬಾಬಾ ಸಾಹೇಬರ ಸಂವಿಧಾನ. ಇಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೂಡಾ ಸಂವಿಧಾನಕ್ಕೆ ಅಡಿಯಾಳುಗಳೇ ವಿನಃ ಸಂವಿಧಾನ ಯಾರಿಗೂ ಅಡಿಯಾಳಲ್ಲ. ಕೊನೆಯದಾಗಿ ಭಾರತದಂತಹ ಅಭಿವೃದ್ಧಿಶೀಲ ದೇಶಕ್ಕೆ ಬೇಕಿರುವುದು ಮಂದಿರವೂ ಅಲ್ಲ, ಮಸೀದಿಯೂ ಅಲ್ಲ. ಭಾರತಕ್ಕೆ ಬೇಕಿರುವುದು ಎಲ್ಲರೂ ನೆಮ್ಮದಿಯಿಂದ ಬದುಕುವಂತಹ ಅಭಿವೃದ್ಧಿ ಪರವಾದ, ಸಾಮರಸ್ಯದಿಂದ ಕೂಡಿದ ಪ್ರಜಾಸತ್ತಾತ್ಮಕ ವಾತಾವರಣ ಮಾತ್ರ.

ಇದನ್ನು ಬಿಟ್ಟು ಧರ್ಮ ಮತ್ತು ಜಾತಿಯ ಆಧಾರದಲ್ಲಿ ದೇಶದ ಸಾಮರಸ್ಯವನ್ನು ಹಾಳು ಮಾಡುತ್ತಾ ಸಾಗಿದರೆ, ಭಾರತೀಯರಾದ ನಾವು ಕಷ್ಟಪಟ್ಟು ಪಡೆದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವು ಇನ್ನೆಂದೂ ನಮಗೆ ಮರಳಿ ಬಾರದಂತೆ ನಾಶವಾಗುತ್ತದೆ.

#ಸಂವಿಧಾನವೇ_ಆತ್ಮ

Exit mobile version