ಹುಲಿ, ಚಿರತೆ ಬೇಟೆಯಾಡಿದ್ದ ನಾಲ್ವರ ಬಂಧನ: ಬಂಧಿತರಿಂದ ಹುಲಿ, ಚಿರತೆ ಚರ್ಮ ವಶ

ಮೈಸೂರು, ಮಾ. 31: ಹುಲಿ ಚಿರತೆ ಬೇಟೆಯಾಡಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಮೈಸೂರಿನಲ್ಲಿ ಬಂಧಿಸಿದ್ದಾರೆ.

ಹುಣಸೂರು ತಾಲ್ಲೂಕಿನ ನೆಲ್ಲೂರು ಪಾಳ್ಯ, ಅಂಬೇಡ್ಕರ್‌ನಗರದ ನಿವಾಸಿ, ಅರುಣ, ನಂಜುಂಡ, ರವಿ ಹಾಗೂ ಕುಟ್ಟೇರಿ ಹಾಡಿುಂ ರಮೇಶ್ ಬಂಧಿತ ಆರೋಪಿಗಳು. ಇವರಿಂದ ಹುಲಿ, ಚಿರತೆ ಚರ್ಮ, ಬೇಟೆಗೆ ಬಳಸುತ್ತಿದ್ದ ಉರುಳು, ಜಾ-ಟ್ರ್ಯಾಪ್ ಹಾಗೂ ಗೂಡ್ಸ್ ಟೆಂಪೋ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಗೆ ಇಳಿದಿದ್ದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಅರುಣನ ಮನೆಯಲ್ಲಿ ನೈಜ ಚರ್ಮ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ನಂತರ ಅವುಗಳನ್ನು ಕೊಳ್ಳುವ ನೆಪದಲ್ಲಿ ಹೋಗಿ, ಅವು ನಿಜವಾದ ಚರ್ಮ ಎಂದು ಕಂಡುಬಂದ ಹಿನ್ನೆಲೆ ಸೋಮವಾರ ರಾತ್ರಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ 6 ತಿಂಗಳ ಹಿಂದೆ ಆನೆ ಕಂದಕದ ಬಳಿ ಆರೋಪಿ ರಮೇಶ, ಬೇಟೆಗಾಗಿ ಉರುಳು ಹಾಕಿದ್ದ. ಮರುದಿನವೇ ಭಾರೀ ಗಾತ್ರದ ಹುಲಿಯೊಂದು ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತು. ಇದನ್ನು ಕಂಡ ರಮೇಶ, ಪರಿಚಿತ ರವಿಗೆ ವಿಷಯ ತಿಳಿಸಿ, ಸಹಾಯ ಕೇಳಿದ್ದರು.

ರವಿ, ಸಾವನ್ನಪ್ಪಿದ್ದ ಹುಲಿಯನ್ನು ತನ್ನ ಮಹೇಂದ್ರ ಜೀಟೊ ವಾಹನದಲ್ಲಿ ಹಾಕಿಕೊಂಡು ಅಂಬೇಡ್ಕರ್ ನಗರಕ್ಕೆ ತಂದಿದ್ದರು. ಅಲ್ಲಿ 3ನೇ ಆರೋಪಿ ನಂಜುಂಡ ಹುಲಿಯ ಚರ್ಮ ಸುಲಿದಿದ್ದ. 4ನೇ ಆರೋಪಿ ಅರುಣನ ಮನೆುಂಲ್ಲಿ ಹುಲಿ ಚರ್ಮವನ್ನು ಬಚ್ಚಿಟ್ಟು, ಅದೇ ವಾಹನದಲ್ಲಿ ಹುಲಿಯ ಕಳೇಬರವನ್ನು ಸಾಗಿಸಿ ಲಕ್ಷತ್ಮಣತೀರ್ಥ ನದಿಗೆ ಎಸೆದಿದ್ದರು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನವೇ ಈ ನಾಲ್ಕು ಆರೋಪಿಗಳು ವರ್ಷದ ಹಿಂದೆ ಹುಣಸೂರಿನ ಟಿಬೆಟ್ ಕಾಲೊನಿ ಬಳಿ ಹುಣಸೇಕಟ್ಟೆಯಲ್ಲಿ ಜಾಟ್ರ್ಯಾಪ್ ಇಟ್ಟು ಚಿರತೆಯನ್ನು ಕೊಂದು, ದೇಹವನ್ನು ದಹಿಸಿ ತಿಂದಿದ್ದರು ಎಂಬುದನ್ನೂ ಅರಣ್ಯಾಧಿಕಾರಿಗಳು ಬಯಲಿಗೆಳೆದಿದ್ದಾರೆ.

Exit mobile version