ದೆಹಲಿ ನಿವಾಸಿಗಳಿಗೆ ಉಚಿತ ಪಡಿತರ; ಆಟೊ, ಟ್ಯಾಕ್ಸಿ ಚಾಲಕರಿಗೆ ₹5000 ಆರ್ಥಿಕ ನೆರವು: ಅರವಿಂದ್ ಕೇಜ್ರಿವಾಲ್ ಘೋಷಣೆ

ದೆಹಲಿ, ಮೇ. 04: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಸಿಸುತ್ತಿರುವ ಪಡಿತರ ಚೀಟಿ ಹೊಂದಿರುವ ಎಲ್ಲ ನಾಗರಿಕರಿಗೆ ಉಚಿತ ಪಡಿತರ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಘೋಷಿಸಿದ್ದಾರೆ. ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿದವರ ಸಂಖ್ಯೆ 72 ಲಕ್ಷ ಇದೆ ಎಂದು ಹೇಳಿದ ಕೇಜ್ರಿಲಾಲ್ ಮುಂದಿನ ಎರಡು ತಿಂಗಳುಗಳ ಕಾಲ ಇವರಿಗೆ ಉಚಿತ ಪಡಿತರ ನೀಡಲಾಗುವುದು ಎಂದಿದ್ದಾರೆ.

ಕೊವಿಡ್ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ನಿಯಂತ್ರಣ ಹೇರಲಾಗಿದೆ. ಇದರರ್ಥ ಇನ್ನೆರಡು ತಿಂಗಳು ಲಾಕ್​ಡೌನ್ ಮುಂದುರಿಯುತ್ತದೆ ಎಂದಲ್ಲ. ಆರ್ಥಿಕ ಸಮಸ್ಯೆ ಇರುವ ಬಡಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ ಕೇಜ್ರಿವಾಲ್.

ಏಪ್ರಿಲ್ 19ರಿಂದ ದೆಹಲಿಯಲ್ಲಿ ಲಾಕ್​ಡೌನ್ ಜಾರಿಯಾಗಿದ್ದು, ಇದರಿಂದ ಸಂಕಷ್ಟಕ್ಕೊಳಗಾಗಿರುವ ಆಟೊ ಮತ್ತು ರಿಕ್ಷಾ ಚಾಲಕರಿಗೆ 5,000 ನಗದು ಆರ್ಥಿಕ ನೆರವು ನೀಡುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಮನೀಶ್ ಸಿಸೊಡಿಯಾ, ಪ್ರಧಾನ ಕಾರ್ಯದರ್ಶಿ ಮತ್ತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಜತೆ ಕೊವಿಡ್ -19 ಅವಲೋಕನ ಸಭೆ ನಡೆಸಿದ ನಂತರ ಕೇಜ್ರಿವಾಲ್ ಈ ನಿರ್ಧಾರ ಪ್ರಕಟಿಸಿದ್ದಾರೆ.

Exit mobile version