ಗಾಳಿಪಟ 2 ಸಕ್ಸಸ್ ; ಪ್ರೇಕ್ಷಕ ಮಹಾಪ್ರಭುವಿಗೆ ವಂದಿಸಿದ ಗಣೇಶ್

ಗೋಲ್ಡನ್ ಸ್ಟಾರ್(Golden Star) ಗಣೇಶ್(Ganesh) ಅಭಿನಯದ ಗಾಳಿಪಟ-2(Gaalipata 2) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದ್ದು, ದೇಶವಿದೇಶಗಳಲ್ಲಿ ಹೊಸ‌ ಟ್ರೆಂಡ್ ಸೃಷ್ಟಿಸಿದೆ. 14‌‌ ವರ್ಷಗಳ ನಂತ್ರ ಮತ್ತೆ ಗಣಿ-ಭಟ್ರು ಜೋಡಿ ಮೋಡಿ ಸಖತ್ ಜೋರಾಗಿದೆ.

ಇನ್ನು, ಇದೇ ಖುಷಿಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಮಾಡಿದ್ದು, ರಾಜಧಾನಿ ಬೆಂಗಳೂರಿನ(Bengaluru) ಖಾಸಗಿ ಹೋಟೆಲ್ನಲ್ಲಿ ಈ ಕಾರ್ಯಕ್ರಮ ನಡೆದಿದೆ.

ಕಾರ್ಯಕ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ನಟಿಯರಾದ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಹಿರಿಯ ನಟರಾದ ಅನಂತ್ನಾಗ್, ಶ್ರೀ ನಾಥ್, ನಿರ್ದೇಶಕ ಯೋಗರಾಜ್ ಭಟ್ ಮತ್ತಿತರರು ಪಾಲ್ಗೊಂಡು ಸಂಭ್ರಮ ಹಂಚಿಕೊಂಡಿದ್ದಾರೆ.


ಮೊದಲು ಮಾತನಾಡಿದ್ದು ನಿರ್ಮಾಪಕ ರಮೇಶ್‌ ರೆಡ್ಡಿ. ಈ ಮೊದಲು ನಾಲ್ಕು ಪ್ರಯತ್ನಗಳಲ್ಲಿ ಫೇಲಾಗಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದ ಅವರು, ಈ ಬಾರಿ ಮಾತ್ರ ಖುಷಿಯಿಂದ, “ನಾನು ಕಡೆಗೂ ಪಾಸಾದೆ. ಮೊದಲ ದಿನ ಚಿತ್ರಕ್ಕೆ ಜನ ಬಂದಿದ್ದು ನೋಡಿಯೇ ಈ ಮಾತು ಹೇಳಿದ್ದೇನೆ.

ನಾನು ಪಾಸಾಗಲು ಕಾರಣಕರ್ತರಾದ ಪ್ರತಿಯೊಬ್ಬರಿಗೂ ಧನ್ಯವಾದ” ಎಂದರು. ಅವರ ಮಾತುಗಳಿಗೆ ಇಡೀ ತಂಡ ಚಪ್ಪಾಳೆ ತಟ್ಟಿ ಸಂಭ್ರಮಿಸಿತು. ನಂತರ ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್, “ಈ ಸಿನಿಮಾ ಆಗುವುದಕ್ಕೆ ಬಹಳ ಮಂದಿ ಕಾರಣಕರ್ತರಿದ್ದಾರೆ. ನಾನು ಮೊದಲು ಅಂದುಕೊಂಡ ಹಾಗೆ ಸಿನಿಮಾ ಮಾಡಿದ್ದರೆ ಈಗಲೂ ಮುಗಿಯುತ್ತಿರಲಿಲ್ಲ.

ಇದನ್ನೂ ಓದಿ : https://vijayatimes.com/pramod-muthalik-furious-statement/

ಆದರೆ ಅನಂತ್‌ ಸರ್‌ ಅವರು ತಮ್ಮ ಅನುಭವ ಹಾಗೂ ಜ್ಞಾನದ ಬಲದಿಂದ ನನ್ನನ್ನು ಸರಿದಾರಿಗೆ ತಂದರು. ಇದು ನನ್ನ ಸಿನಿಮಾ ಅಲ್ಲ, ಜನರ ಸಿನಿಮಾ. ನಾಡಿಗೆ ವಂದನೆ”. ಯಶಸ್ಸಿನ ಬಗ್ಗೆ ಮಾತನಾಡಿದ ಚಿತ್ರದ ನಾಯಕಿ, “ನಾನು ಮುಂಬೈಯವಳು. ಗಾಳಿಪಟ 2 ಚಿತ್ರವನ್ನು ಮುಂಬೈನಲ್ಲಿ ನೋಡಿದೆ. ಜನ ನನ್ನನ್ನು ಅಲ್ಲಿಯೂ ಶ್ವೇತಾ ಎಂದು ಗುರುತಿಸುತ್ತಾರೆ.

ಕರ್ನಾಟಕದ ಹೊರಗೂ ಕನ್ನಡ ಸಂಸ್ಕೃತಿಯನ್ನು ಗೌರವಿಸುತ್ತಾರೆ, ಪ್ರೀತಿಸುತ್ತಾರೆ ಅನ್ನುವುದು ಈ ಸಿನಿಮಾದಿಂದ ಗೊತ್ತಾಯಿತು” ಎಂದರು. ಅದೇ ರೀತಿ, “ಪ್ಯಾನ್‌ ಇಂಡಿಯಾ ಸಿನಿಮಾ ಗಲಾಟೆಯಲ್ಲಿ ಗಾಳಿಪಟ 2 ಗೆದ್ದು ಚಿತ್ರರಂಗಕ್ಕೆ, ಚಿತ್ರರಂಗದ ಪ್ರತಿಯೊಬ್ಬರಿಗೂ ಭರವಸೆ ತುಂಬಿದೆ” ಎಂದು ರಂಗಾಯಣ ರಘು ಅಭಿಪ್ರಾಯ ವ್ಯಕ್ತಪಡಿಸಿದರು.


ಪವನ್‌ ಕುಮಾರ್‌ ಅವರು “ಮತ್ತೆ ಭಟ್ಟರ ಸಹಾಯಕ ನಿರ್ದೇಶಕನಾಗುವ ಆಸೆಯಿದೆ” ಎಂದರು. “ಅನಂತ್‌ ನಾಗ್‌ ಸರ್‌ ಕಜಕಿಸ್ಥಾನಕ್ಕೆ ಬಂದಿರಲೇ ಇಲ್ಲ. ಆದರೆ ಭಟ್ಟರು ಎಷ್ಟು ಪ್ಲಾನ್‌ ಮಾಡಿ ಚಿತ್ರೀಕರಣ ಮಾಡಿದ್ದರು ಎಂದರೆ ಅನಂತ್‌ ಸರ್‌ ಕಜಕಿಸ್ಥಾನಕ್ಕೆ ಬಂದಿರಲಿಲ್ಲ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ, ಅವರ ಬುದ್ಧಿವಂತಿಕೆಗೆ ನಮಸ್ಕಾರ” ಎಂದು ಯೋಗರಾಜ್ ಭಟ್ ಅವರನ್ನು ಹೊಗಳಿದರು.


ನಂತರ ತಮ್ಮ ಖುಷಿ ಹಂಚಿಕೊಂಡ ಹಿರಿಯ ನಟ ಅನಂತ್ ನಾಗ್, “ನಿರ್ಮಾಪಕ ರಮೇಶ್‌ ರೆಡ್ಡಿಯವರು ಗೆದ್ದಿದ್ದು ಸಂತೋಷ. ಅವರು ಮುಂದೆ ಸಿನಿಮಾ ಮಾಡುವಾಗ ಸ್ಕ್ರಿಪ್ಟ್ ಶಕ್ತಿಯುತವಾಗಿದೆಯೇ ಎಂದು ಗಮನಿಸಬೇಕು” ಎಂದರು. ಗಣೇಶ್‌ ಬಗ್ಗೆ ಮೆಚ್ಚಿ ಮಾತನಾಡುವಾಗ, ವೇದಿಕೆಯ ಹತ್ತಿ ಬಂದ ಗಣೇಶ್‌, ಅನಂತ್‌ನಾಗ್‌ ಅವರ ಕಾಲಿಗೆ ನಮಸ್ಕರಿಸಿದ್ದು, ಅವರು ಪರಸ್ಪರ ಇಟ್ಟಿರುವ ಪ್ರೀತಿ, ಗೌರವಕ್ಕೆ ಸಾಕ್ಷಿಯಾಗಿತ್ತು.

https://fb.watch/f4pJz-Et8L/


“ಅನಂತ್‌ ನಾಗ್‌ ಸರ್‌ ನನ್ನ ನಟನೆ ಮೆಚ್ಚಿ ಮಾತನಾಡಿದ್ದು ನನಗೆ ಸಿಕ್ಕ ದೊಡ್ಡ ಆಶೀರ್ವಾದ. ಭಟ್ಟರು ಕತೆ ಕಳುಹಿಸಿದಾಗ ನಾನು ಪ್ರಶ್ನೆಗಳ ಜೊತೆ ಅವರಿಗೆ ಫೋನ್‌ ಮಾಡಿದ್ದೆ. ಅವರು ಆ ಪ್ರಶ್ನೆಗಳಿಗೆ ಉತ್ತರ ಕೊಡುವ ಹಾಗೆ ಸಿನಿಮಾ ಮಾಡಿದ್ದಾರೆ. ಅವರ ವಿಭಿನ್ನತೆ ಹೀಗೆಯೇ ಇರಲಿ ಎಂದು ನಾನು ಆಶಿಸುತ್ತೇನೆ.

ನಮ್ಮ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕ ಮಹಾಪ್ರಭುವಿಗೆ ಮನಸಾರೆ ವಂದಿಸುತ್ತೇನೆ” ಎಂದರು ಗೋಲ್ಡನ್ ಸ್ಟಾರ್. ಇನ್ನು, ಚಿತ್ರವನ್ನು ಕಣ್ತುಂಬಿಕೊಂಡ ಒಬ್ಬ ಅಭಿಮಾನಿಯ ಸಂತಸ ಸಂಭ್ರಮ ಹೇಗಿತ್ತು ಎಂದರೆ, ಏಕಾಏಕಿ ಯೋಗರಾಜ್ ಭಟ್ ತುಟಿಗೆ ಮುತ್ತಿಕ್ಕಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಭಿಮಾನಿಗಳ ಸಂಭ್ರಮದ ಮಧ್ಯೆ ಎಂಟ್ರಿ ಕೊಟ್ಟ ಭಟ್ರನ್ನು, ಅಭಿಮಾನಿಗಳು ತಬ್ಬಿ ಸಂತಸ ಪಟ್ಟರು. ಬಳಿಕ ಅಭಿಮಾನಿಯೊಬ್ಬ ಭಟ್ಟರ ತುಟಿಗೆ ಮುತ್ತಿಟ್ಟಿದ್ದಾನೆ. ಅಭಿಮಾನಿಗಳನ್ನು ಇಷ್ಟರ ಮಟ್ಟಿಗೆ ಮೋಡಿ ಮಾಡಿದ ಗಾಳಿಪಟ 2 ಚಿತ್ರ, ಕೇವಲ ಮೂರು ದಿನಗಳಲ್ಲಿ 20 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ ಎನ್ನಲಾಗುತ್ತಿದೆ.

ಹೀಗಾಗಿ ಹಿಂದಿ ಸೇರಿ ಸೌತ್‌ ಭಾಷೆಗಳಿಗೆ ಈ ಚಿತ್ರವನ್ನು ಡಬ್‌ ಮಾಡುವ ನಿರ್ಧಾರಕ್ಕೆ ಬಂದಿದ್ದಾರಂತೆ ನಿರ್ಮಾಪಕರು. ಹಿಂದಿ ಡಬ್‌ ವರ್ಷನ್‌ ಚಿತ್ರವನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆಯೂ ಪ್ಲಾನ್‌ ನಡೆಯುತ್ತಿದೆ.

Exit mobile version