ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಂದ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆ ಹಾನಿ ಪ್ರದೇಶಗಳ ಪರಿಶೀಲನೆ

ಗದಗ ನ 24 :  ಇಲ್ಲಿ ಸಮಿಪದ ತಿಮ್ಮಾಪೂರ ಹಾಗೂ ಹರ್ಲಾಪೂರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ   ಸುರಿಯುತ್ತಿರುವ ಮಳೆಗೆ  ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆ ಸಂಪೂರ್ಣ ಹಾಳಾಗಿ ನೀರಿನಲ್ಲಿ  ಕೊಳೆತು ಹೋಗಿರುವದನ್ನು ಪರಿಶೀಲನೆ ಮಾಡಿದ ಗದಗ ಜಿಲ್ಲಾ ತೋಟಗಾರಿಕಾ ಅಧಿಕಾರಿಗಳು ಎರಡು ಗ್ರಾಮಕ್ಕೆ ಭೇಟಿ ನೀಡಿ ರೈತರ ಜಮೀನುಗಳಲ್ಲಿ ಬೆಳೆದ ಈರುಳ್ಳಿ , ಮೆಣಸಿನಕಾಯಿ ಬೆಳೆಯ ಹಾನಿಯನ್ನು ಪರೀಕ್ಷಿಸಿದರು.

ತೋಟಗಾರಿಕೆ ಇಲಾಖೆಯ ಸಹಾಯಕ  ಅಧಿಕಾರಿಯಾದ ಶಂಭುಲಿಂಗಪ್ಪ ನೆಗಳೂರು ಅವರು ಮಾತನಾಡಿ ಪ್ರಸ್ತುತ ಗದಗ ತಾಲ್ಲೂಕಿನಲ್ಲಿ 12470 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ . ಅದರಲ್ಲಿ  ತಿಮ್ಮಾಪೂರ ಗ್ರಾಮದಲ್ಲಿ ಈರುಳ್ಳಿ 783 ಹೆಕ್ಟೇರ್ ಮತ್ತು ಮೆಣಸಿನ ಕಾಯಿ 37 ಹೆಕ್ಟೇರ್ ಬಿತ್ತನೆಯಾಗಿದೆ ಹಾಗೂ ಹರ್ಲಾಪೂರ ಗ್ರಾಮದಲ್ಲಿ ಈರುಳ್ಳಿ 1857 ಹೆಕ್ಟೇರ್ ಮತ್ತು 783 ಹೆಕ್ಟೇರ್  ಪ್ರದೇಶದಲ್ಲಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆದಿದ್ದು,  ಈಗ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಭಾಗಶಃ ಈರುಳ್ಳಿ ಮೆಣಸಿನಕಾಯಿ ಬೆಳೆ ನಷ್ಟವಾಗಿದ್ದು ಈ ವರದಿಯನ್ನು ನಾನು ಕಂದಾಯ ಇಲಾಖೆಗೆ ಮತ್ತು ಜಿಲ್ಲಾಧಿಕಾರಿ ಕಚೇರಿಗಳಿಗೆ  ಬೆಳೆನಷ್ಟ ಪ್ರಸ್ತಾವನೆಯ ವರದಿಯನ್ನು ಕಳುಹಿಸುತ್ತೇನೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಮಾತನಾಡಿ ಸರ್ಕಾರಕ್ಕೆ ಬೇಗನೆ ಬೆಳೆ ನಷ್ಟ ವರದಿಯನ್ನು ಸಲ್ಲಿಸಿ ಸರಿಯಾದ ಸಮಯಕ್ಕೆ ರೈತರಿಗೆ ಈರುಳ್ಳಿ, ಮೆಣಸಿನಕಾಯಿ, ಹಾಗೂ ಹಿಂಗಾರು ಬೆಳೆಯಾದ ಜೋಳ ಕಡ್ಡಿ ಗೋಧಿ ಬೆಳೆಗಳಿಗ ನಷ್ಟ ಪರಿಹಾರವನ್ನು ನೀಡಬೇಕು .ಹಾಗೂ ಗದಗ ತಾಲ್ಲೂಕನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಣೆ ಮಾಡಿ ಎಲ್ಲಾ  ರೈತರಿಗೂ ನೆರವಾಗಬೇಕು . ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಬೆಳೆ ವಿಮೆ ಹಣವನ್ನು ಬೇಗನೆ ಬಿಡುಗಡೆ ಮಾಡಿ ರೈತರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿಸಬೇಕೆಂದು ಆಗ್ರಹಿಸಿದರು .  ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕರಾದ ಮಲ್ಲಯ್ಯ ಕಡ್ಲಿಮಠ ಹಾಗೂ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಸಂತೋಷ ಜಾಧವ್ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೋಗಿನ, ಶರಣಪ್ಪ ಜೋಗಿನ, ಭೀಮಪ್ಪ ರಾಮಜಿ ಹನುಮಪ್ಪ ಭೀಮನೂರ, ಶೇಖಪ್ಪ ಘಂಟೆ, ಪ್ರಕಾಶ್ ಇದ್ಲಿ, ರಾಮಪ್ಪ ತಳವಾರ, ವಸಂತ ಬೇಟಗೆರಿ, ಇನ್ಮಿತರ ರೈತರು ಪಾಲ್ಗೊಂಡಿದ್ದರು.

Exit mobile version