ಯಾದಗಿರಿ ಮಹಿಳೆಯ ಹಲ್ಲೆ, ಗ್ಯಾಂಗ್‌ರೇಪ್‌ ಪ್ರಕರಣ ನಾಲ್ವರು ಕಾಮುಕರು ಅರೆಸ್ಟ್‌. ಬಂಧಿತರಲ್ಲಿ ಒಬ್ಬ ಪೊಲೀಸ್‌ ವಾಹನ ಚಾಲಕ !

ಯಾದಗಿರಿಯ ಶಹಾಪುರ ಬಳಿ ಮಹಿಳೆಯನ್ನು ನಗ್ನಗೊಳಿಸಿ ವಿಕೃತಿ ಮೆರೆದ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಪೈಶಾಚಿಕ ಕೃತ್ಯ ಮಾಧ್ಯಮಗಳಲ್ಲಿ ಬಯಲಾದ ಬಳಿಕ ಎಚ್ಚೆತ್ತುಕೊಂಡ್ರು ಪೊಲೀಸರು. ಆರಂಭದಲ್ಲಿ ಹಲ್ಲೆ ಅಂತ ಭಾವಿಸಲಾಗಿತ್ತು, ಆದ್ರೆ ದುಷ್ಟರು ಗ್ಯಾಂಗ್‌ರೇಪ್‌ ಕೂಡ ಮಾಡಿದ್ರು.

ಯಾದಗಿರಿ,ಸೆ.14: ಯಾದಗಿರಿ ಜಿಲ್ಲೆಯ ಶಹಾಪುರ ಸಮೀಪ ಮಹಿಳೆಯೊಬ್ಬರನ್ನು ನಗ್ನಗೊಳಿಸಿ ಹಲ್ಲೆ ನಡೆಸಿ, ವಿಕೃತಿ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸರು ನಾಲ್ವರು ಕಾಮುಕ ಆರೋಪಿಗಳನ್ನು ಬಂಧಿಸಿದ್ದಾರೆ. 8-9 ತಿಂಗಳ ಹಿಂದೆ ಶಹಾಪುರದಿಂದ 10 ಕಿ.ಮೀ. ದೂರದ ಹೊರವಲಯದಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ಸಂತ್ರಸ್ತೆಯ ಮೇಲೆ ಆರೋಪಿಗಳು ಹಲ್ಲೆ, ಲೈಂಗಿಕ ದೌರ್ಜನ ಮೆರೆದಿದ್ದು ಮಾತ್ರವಲ್ಲದೆ ಸಾಮೂಹಿಕ ಅತ್ಯಾಚಾರವನ್ನೂ ನಡೆಸಿದ್ದರು ಎಂಬ ಅಂಶ ವಿಚಾರಣೆ ವೇಳೆ ಬಯಲಾಗಿದೆ. ಸಂತ್ರಸ್ತೆಯನ್ನು ಠಾಣೆಗೆ ಕರೆಸಿ ಹೇಳಿಕೆ ಪಡೆದುಕೊಂಡಿರುವ ಪೊಲೀಸರು ಆಕೆ ನೀಡಿರುವ ದೂರಿನ ಆಧಾರದ ಮೇಲೆ ಜಾತಿನಿಂದನೆ, ಅಪಹರಣ, ಹಲ್ಲೆ ಹಾಗೂ ಗುಂಪು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

ಬಂಧಿತರಲ್ಲಿ ಒಬ್ಬ ಪೊಲೀಸ್‌ ಜೀಪು ಚಾಲಕ: ಘಟನೆಗೆ ಸಂಬಂಧಿಸಿ ಶಹಾಪುರ ಠಾಣೆಯಲ್ಲಿ ಕಲಂ 354(ಬಿ), 366, 394, 376 (ಡಿ), 504, 506/34 ಐಪಿಸಿ, ಮತ್ತು 3 (1)(ಡಬ್ಲ್ಯೂ) 3(2) (ವಿ) ಎಸ್ಸಿ/ಎಸ್ಟಿಕಾಯ್ದೆಯಡಿ ಸೋಮವಾರ ದೂರು ದಾಖಲಾಗಿದೆ. ಆರೋಪಿಗಳಾದ ಶಹಾಪುರದ ಬೇವಿನಹಳ್ಳಿಯ ಲಿಂಗರಾಜ್‌ (24), ಗುತ್ತಿಪೇಟೆಯ ಅಯ್ಯಪ್ಪ (23), ಶಹಾಪುರದ ಮಾಮದಾಪುರ ಬಡಾವಣೆಯ ಭೀಮಾಶಂಕರ್‌ (28) ಹಾಗೂ ಮಮದಾಪುರ ಪ್ರದೇಶದ ಶರಣು (22) ಅವರನ್ನು ಬಂಧಿಸಲಾಗಿದೆ. ಇದರಲ್ಲಿ ಮೊದಲ ಆರೋಪಿ ಲಿಂಗರಾಜ್‌, ಹೋಂಗಾರ್ಡ್‌ ಜೊತೆಗೆ ಗುತ್ತಿಗೆ ಆಧಾರದ ಮೇಲೆ ಪೊಲೀಸ್‌ ಅಧಿಕಾರಿಯೊಬ್ಬರ ಸರ್ಕಾರಿ ವಾಹನ ಚಾಲಕನಾಗಿ ಕಾರ್ಯನಿರ್ವಹಿಸಿದ್ದ ಎನ್ನಲಾಗಿದೆ. ನಾಲ್ವರೂ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಕೊಲ್ಲುವುದಾಗಿ ಬೆದರಿಸಿದ್ರು, ಹಾಗಾಗಿ ದೂರು ಕೊಟ್ಟಿಲ್ಲ:

8-9 ತಿಂಗಳ ಹಿಂದೆಯೇ ಈ ಪ್ರಕರಣ ನಡೆದರೂ ಜೀವಬೆದರಿಕೆ ಹಿನ್ನೆಲೆಯಲ್ಲಿ ದೂರು ನೀಡಲು ಆಗಿರಲಿಲ್ಲ ಎಂದು ಸಂತ್ರಸ್ತೆ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾಳೆ. ದೌರ್ಜನ್ಯ ನಡೆದಿರುವ ವೀಡಿಯೋದಲ್ಲಿದ್ದ ಸಂತ್ರಸ್ತೆಯನ್ನು ಪೊಲೀಸರು ಸೋಮವಾರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಶಹಾಪುರ ತಾಲೂಕಿನ ಈ ಸಂತ್ರಸ್ತೆ ಮೊದಲು ಪುಣೆಯಲ್ಲಿ ವಾಸಿಸುತ್ತಿದ್ದಳು. ಮೂವರು ಮಕ್ಕಳಿರುವ ಈಕೆಯ ಪತಿ ಕೌಟುಂಬಿಕ ಕಲಹದಿಂದಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂತ್ರಸ್ತೆಗೆ ಜಿಲ್ಲಾಧಿಕಾರಿಯಿಂದ ಧನಸಹಾಯ:

ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಹಾಗೂ ಎಸ್ಪಿ ವೇದಮೂರ್ತಿ ಶಹಾಪುರಕ್ಕೆ ಭೇಟಿ ನೀಡಿ ಸಂತ್ರಸ್ತೆಯಿಂದ ಮಾಹಿತಿ ಪಡೆದು, ಮಾನಸಿಕವಾಗಿ ಧೈರ್ಯ ತುಂಬಿದ್ದಾರೆ. ಸ್ಥೈರ್ಯ ಯೋಜನೆಯಡಿ 25 ಸಾವಿರ ರು. ಧನಸಹಾಯ ಹಾಗೂ ದೌರ್ಜನ್ಯ ತಡೆ ಕಾಯ್ದೆಯಡಿ 50 ಸಾವಿರ ರು. ಪರಿಹಾರ ಧನವನ್ನು ಸಂತ್ರಸ್ತೆಗೆ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪ್ರಭಾಕರ ಕವಿತಾಳ್‌ ಸಂತ್ರಸ್ತೆಯ ದೂರು ಆಲಿಸಿ, ಸಾಂತ್ವನ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ನಡೆಯುವ ಕಲಬುರಗಿಯ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ಸಂತ್ರಸ್ತೆಯನ್ನು ದಾಖಲಿಸಲಾಗುತ್ತಿದ್ದು, ಸ್ವಯಂ ಉದ್ಯೋಗಕ್ಕಾಗಿ ತರಬೇತಿ ಹಾಗೂ ಸ್ವಯಂ ಉದ್ಯೋಗಕ್ಕಾಗಿ ಸಾಲವನ್ನು ಜಿಲ್ಲಾಡಳಿತದ ವತಿಯಿಂದ ನೀಡಲಾಗುತ್ತದೆ ಎಂದು ಪ್ರಭಾಕರ್‌ ಕವಿತಾಳ್‌ ತಿಳಿಸಿದ್ದಾರೆ.

ಸದನದಲ್ಲಿ ವಿಷಯ ಪ್ರಸ್ತಾಪಿಸುತ್ತೇವೆ: ಸಿದ್ದರಾಮಯ್ಯ

ಇತ್ತೀಚೆಗಷ್ಟೇ ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ವೇಳೆ ಗೃಹ ಸಚಿವರು ಸಂಜೆ ವೇಳೆ ಯುವತಿ ಹೊರಗೆ ಹೋಗಿದ್ದು ತಪ್ಪು ಎಂದಿದ್ದರು. ಇದೀಗ ಈ ಮಹಿಳೆ ವಿಚಾರದಲ್ಲೂ ಇದನ್ನೇ ಹೇಳುತ್ತಾರೆ. ಇವರಿಗೆ ನಾಚಿಕೆ ಆಗಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

Exit mobile version