ಡಿಸೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 0.4ರಷ್ಟು ಬೆಳವಣಿಗೆ

ನವದೆಹಲಿ, ಫೆ. 27: ಕಳೆದ ವರ್ಷ ಎರಡು ತ್ರೈಮಾಸಿಕ ಅವಧಿಯಲ್ಲಿ ಪ್ರಪಾತಕ್ಕೆ ಕುಸಿದಿದ್ದ ದೇಶದ ಆರ್ಥಿಕತೆ ಕೊನೆಯ ತ್ರೈಮಾಸಿಕದಲ್ಲಿ ಗಣನೀಯವಾಗಿ ಅಭಿವೃದ್ಧಿ ಕಂಡಿದೆ. 2020ರ ವರ್ಷದ ಡಿಸೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 0.4ರಷ್ಟು ಬೆಳವಣಿಗೆಯನ್ನು ಸಾಧಿಸಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ ಮಾಹಿತಿ ಬಿಡುಗಡೆ ಮಾಡಿದೆ. ಇದರೊಂದಿಗೆ ಭಾರತದ ಆರ್ಥಿಕತೆಯು V ಆಕಾರದಲ್ಲಿ ಚೇತರಿಕೆಯಾಗುತ್ತದೆ ಎಂದು ಸರ್ಕಾರ ಮಾಡುತ್ತಿದ್ದ ವಾದಕ್ಕೆ ಪುಷ್ಟಿ ಸಿಕ್ಕಿದೆ.

2020ರಲ್ಲಿ ಕೊರೋನಾ ಕಾರಣಕ್ಕೆ ಲಾಕ್ ಡೌನ್ ಘೋಷಿಸಿದ ಬಳಿಕ ಆರ್ಥಿಕತೆ ಸ್ತಬ್ದಗೊಂಡಿತ್ತು.  ಈ ಪರಿಣಾಮದಿಂದಾಗಿ ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಮೈನಸ್ 24.4% ಕುಸಿತಗೊಂಡಿತ್ತು. ಲಾಕ್​ಡೌನ್ ತೆರವಾದ ಬಳಿಕ ಆರ್ಥಿಕತೆ ನಿಧಾನಗತಿಯಲ್ಲಿ ಚೇತರಿಸಿಕೊಂಡಿತು. ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಕುಸಿತ ಮೈನಸ್ 7.3%ಗೆ ಸ್ಥಗಿತಗೊಂಡಿತ್ತು. ಇದೀಗ ಕ್ಯಾಲೆಂಡರ್ ವರ್ಷದ ಕೊನೆಯ ತ್ರೈಮಾಸಿಕದಲ್ಲಿ 0.4% ಜಿಡಿಪಿ ವೃದ್ಧಿಯಾಗಿರುವುದು ಗಮನಾರ್ಹ. ಇದೀಗ ವಿವಿಧ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಗರಿಗೆದರಿರುವ ಹಿನ್ನೆಲೆಯಲ್ಲಿ ಈ ಕ್ಯಾಲೆಂಡರ್ ವರ್ಷ ಜಿಡಿಪಿ ಇನ್ನೂ ಹೆಚ್ಚು ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸುವ ಆಶಾಭಾವನೆ ಮೂಡಿಸಿದೆ.

ಲಾಕ್​ಡೌನ್ ವೇಳೆ ದೇಶದ ಆರ್ಥಿಕತೆಯ ಬುನಾದಿಯಾಗಿದ್ದ ಕೃಷಿ ವಲಯ ಈ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಶೇ. 3.9ರಷ್ಟು ಬೆಳವಣಿಗೆ ಸಾಧಿಸಿದೆ. ಆದರೆ, ವಿದ್ಯುತ್, ಗ್ಯಾಸ್, ನೀರು ಸರಬರಾಜು ಇತ್ಯಾದಿ ಸೇವೆಗಳ ವಲಯ ಶೇ. 7.3ರಷ್ಟು ವೃದ್ಧಿ ಸಾಧಿಸಿರುವುದು ಎನ್​ಎಸ್​ಒ ಅಂಕಿ ಅಂಶದಿಂದ ತಿಳಿದುಬಂದಿದೆ. ರಿಯಲ್ ಎಸ್ಟೇಟ್ ವಲಯ, ಅದರಲ್ಲೂ ಕಟ್ಟಡ ನಿರ್ಮಾಣ ವಲಯ ಶೇ. 6.2ರಷ್ಟು ಅಭಿವೃದ್ಧಿ ಹೊಂದಿದೆ. ಬಹಳ ಮುಖ್ಯವಾಗಿರುವ ತಯಾರಿಕಾ ವಲಯ ಶೇ. 1.6ರಷ್ಟು ಹೆಚ್ಚಳ ಹೊಂದಿದೆ.

2020-21ರ ಹಣಕಾಸು ವರ್ಷದಲ್ಲಿ ಜನವರಿಯಿಂದ ಮಾರ್ಚ್​ವರೆಗೆ ಇನ್ನೂ ಒಂದು ತ್ರೈಮಾಸಿಕ ಅವಧಿ ಇದ್ದು ಜಿಡಿಪಿ ಇನ್ನಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ. ಈ ನಿರೀಕ್ಷೆ ನಿಜವಾದಲ್ಲಿ ಈ ಹಣಕಾಸು ವರ್ಷ ಜಿಡಿಪಿ ಮತ್ತೆ ಹಳಿಗೆ ಬರುವ ಎಲ್ಲಾ ಸಾಧ್ಯತೆ ಇದೆ.

Exit mobile version