ಹಲಾಲ್ ಮಾಂಸ ಸೇವಿಸುವ ಮುಸ್ಲಿಮರನ್ನು ಮೆಚ್ಚುತ್ತೇನೆ, ಹಿಂದೂಗಳು ‘ಜಟ್ಕಾಕಟ್’ ಮಾತ್ರ ಸೇವಿಸಬೇಕು: ಸಚಿವ ಗಿರಿರಾಜ್ ಸಿಂಗ್

New Delhi: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ (Giriraj Singh) ಅವರು ತಮ್ಮ ಸ್ವಕ್ಷೇತ್ರ ಬೇಗುಸರಾಯ್ ಲೋಕಸಭಾ ಕ್ಷೇತ್ರದಲ್ಲಿ ಮಾತನಾಡಿದ್ದು, ಹಲಾಲ್ ಮಾಂಸವನ್ನು ಮಾತ್ರ ಸೇವಿಸುವ ಮುಸ್ಲಿಮರನ್ನು ನಾನು ಮೆಚ್ಚುತ್ತೇನೆ. ಹಿಂದೂಗಳು ಸಹ ತಮ್ಮದೇ ಆದ ಧಾರ್ಮಿಕ ಸಂಪ್ರದಾಯಗಳಿಗೆ ಇದೇ ರೀತಿಯ ಬದ್ಧತೆ ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ.

ಹಿಂದೂಗಳು ಹಲಾಲ್ ಮಾಂಸವನ್ನು (Halal Meat) ತಿನ್ನುವುದನ್ನು ಬಿಟ್ಟುಬಿಡಿ. ಕತ್ತಿಯಿಂದ ಒಂದೇ ಏಟಿಗೆ ಬಲಿಯಾದ ಪ್ರಾಣಿಗಳ ಮಾಂಸವನ್ನು, ಅಂದರೆ ‘ಜಟ್ಕಾಕಟ್’ (Jatka Cut) ಮಾತ್ರ ಸೇವಿಸಬೇಕು ಎಂದು ಹೇಳಿದ ಅವರು ‘ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮ ‘ಧರ್ಮ’ಕ್ಕೆ ಅಪಚಾರ ಮಾಡುವುದಿಲ್ಲ’ ಎಂದು ಅಲ್ಲಿ ನೆರೆದಿದ್ದ ತಮ್ಮ ಬೆಂಬಲಿಗರಿಗೆ ಪ್ರತಿಜ್ಞೆ ಮಾಡುವಂತೆ ಸೂಚಿಸಿದರು.

ಜಟ್ಕಾಕಟ್ ಮೂಲಕ ಹಿಂದೂಗಳು ಪ್ರಾಣಿ ವಧೆ ಮಾಡುತ್ತಾರೆ. ಅಂದರೆ, ಅವರು ಒಂದೇ ಹೊಡೆತದಲ್ಲಿ ಪ್ರಾಣಿಬಲಿ ಮಾಡುತ್ತಾರೆ. ಹಾಗಾಗಿ, ಅವರೆಲ್ಲಾ ಹಲಾಲ್ ಮಾಂಸ ತಿನ್ನುವ ಮೂಲಕ ತಮ್ಮನ್ನು ತಾವು ಧಾರ್ಮಿಕ ಭ್ರಷ್ಟಗೊಳಿಸಬಾರದು. ಹಿಂದೂಗಳೆಲ್ಲಾ ಸದಾ ಜಟ್ಕಾಕಟ್ ಮಾಂಸ ಸೇವನೆಗೆ ಮಾತ್ರ ಅಂಟಿಕೊಳ್ಳಬೇಕು ಎಂದರು.

ಜಟ್ಕಾ ಮಾಂಸ ಮಾತ್ರ ಮಾರಾಟ ಮಾಡುವ ಅಂಗಡಿಗಳ ಸ್ಥಾಪನೆಯ ಹೊಸ ವ್ಯವಹಾರ ಮಾದರಿಯ ಕುರಿತ ಅಗತ್ಯವನ್ನು ಕೇಂದ್ರ ಸಚಿವರು ತಮ್ಮ ಬೆಂಬಲಿಗರಿಗೆ ಒತ್ತಿ ಹೇಳಿದರು. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ‘ಹಲಾಲ್’ ಪ್ರಮಾಣೀಕೃತ ಆಹಾರ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದಂತೆ, ಬಿಹಾರದಲ್ಲೂ ಇದೇ ಮಾದರಿಯ ಕ್ರಮ ತಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರಿಗೆ ಗಿರಿರಾಜ್ ಸಿಂಗ್ ಪತ್ರ ಬರೆದಿದ್ದರು.

ಹಲಾಲ್ ಪ್ರಮಾಣೀಕರಣದ ಆಹಾರ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದ್ದು, ಕಳೆದ ತಿಂಗಳು ಉತ್ತರ ಪ್ರದೇಶ ಸರ್ಕಾರವು ‘ಹಲಾಲ್ ಪ್ರಮಾಣಪತ್ರ’ (Halal Certificate) ಅಕ್ರಮ ವಿತರಣೆಯ ವಿರುದ್ಧ ನಿರ್ಣಾಯಕ ನಿರ್ಧಾರ ತೆಗೆದುಕೊಂಡಿತು. ಅಷ್ಟೇ ಅಲ್ಲದೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Seetharaman) ಕೂಡ ಯುಪಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಆಹಾರ ಪ್ರಮಾಣೀಕರಣವನ್ನು ಸರ್ಕಾರಿ ಸಂಸ್ಥೆಗಳು ಮಾತ್ರ ಮಾಡಬೇಕೇ ಹೊರತು ಸರ್ಕಾರೇತರ ಸಂಸ್ಥೆಗಳಿಂದಲ್ಲ ಎಂದು ಅವರು ಹೇಳಿದರು. ಹಲಾಲ್ ಉತ್ಪನ್ನಗಳನ್ನು ನಿಷೇಧಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಭಾರತೀಯ ಜನತಾ ಪಕ್ಷವನ್ನು ಕಟುವಾಗಿ ಟೀಕಿಸಿದರು. ‘ಸರ್ಕಾರದ ಈ ನಿರ್ಧಾರವು ಸಮುದಾಯಗಳ ನಡುವೆ ಬಿರುಕು ಮೂಡಿಸುತ್ತಿದೆ’ ಎಂದು ಆರೋಪಿಸಿದರು.

ಶ್ರೀರಾಮಸೇನೆ ಸೇರಿದಂತೆ ಕೆಲ ಹಿಂದುತ್ವ ಸಂಘಟನೆಗಳು ಕಳೆದ ವರ್ಷ ಕರ್ನಾಟಕದಲ್ಲೂ ಹಲಾಲ್ ಕಟ್ ವಿರುದ್ಧ ಅಭಿಯಾನ ಆರಂಭಿಸಿದ್ದರು. ಹಲಾಲ್ ಬೋರ್ಡ್ (Halal Board) ಹಾಕಿಕೊಂಡು ವ್ಯವಹಾರ ನಡೆಸುತ್ತಿದ್ದ ಹೋಟೆಲ್‌ಗಳು ಹಾಗೂ ಅಂಗಡಿಗಳ ಮೇಲೆ ದಾಳಿ ಮಾಡಿದ್ದರು.

ಕರ್ನಾಟಕದ (Karnataka) ಜನರು ಈ ಬಾರಿಯ ಯುಗಾದಿಯಲ್ಲಿ ಬರುವ ಹೊಸತೊಡಕು ಹಬ್ಬದಲ್ಲಿ ಹಿಂದೂಗಳು ಹಲಾಲ್ ಕಟ್ ಮಾಂಸವನ್ನು ಬಳಸಬೇಡಿ ಬದಲಾಗಿ ಜಟ್ಕಾ ಕಟ್ ಮಾಂಸವನ್ನೇ ಬಳಸಬೇಕು ಎಂದು ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಮಾಡಿದ ಮನವಿಗೆ ಅಷ್ಟಾಗಿ ಸ್ಪಂದಿಸಿರಲಿಲ್ಲ ಆದರೆ ರಾಜ್ಯದಲ್ಲಿ ಭುಗಿಲೆದ್ದಿದ್ದ ಈ ವಿವಾದ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು.

ಭವ್ಯಶ್ರೀ ಆರ್ ಜೆ

Exit mobile version