ರಾಜ್ಯಕ್ಕೊಂದು ಸುಭದ್ರವಾದ ಸರ್ಕಾರ ಕೊಡಿ, ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ತೊಲಗಿ : ಸಿದ್ದರಾಮಯ್ಯ

ಬೆಂಗಳೂರು,ಜೂ.17: ಬಿಜೆಪಿಯಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ ಕಿಡಿಕಾರಿರುವ ಪ್ರತಿಪಕ್ಷ‌ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಆಡಳಿತ ಯಂತ್ರ ಸ್ಥಬ್ದವಾಗಿರುವುದು ರಾಜ್ಯದ ಜನರ ದೌರ್ಭಾಗ್ಯ ಎಂದು ಟೀಕಿಸಿದ್ದಾರೆ.

ಮುನಿದಿರುವ ಪ್ರಕೃತಿ ಅಲ್ಪ ದಯೆತೋರುತ್ತಿರುವ ಕಾರಣ, ಕೊರೊನಾ ಸೋಂಕು ಸ್ವಲ್ಪ ತಹಬಂದಿಗೆ ಬರುತ್ತಿದೆ. ಆದರೆ ರಾಜ್ಯ ಸರ್ಕಾರದಲ್ಲಿ ಭಿನ್ನಮತದ ಜಗಳ ತಾರಕಕ್ಕೇರಿದ್ದು, ಆಡಳಿತ ಯಂತ್ರ ಸಂಪೂರ್ಣ ಸ್ಥಬ್ಧವಾಗಿರುವುದು ರಾಜ್ಯದ ಜನರ ದೌರ್ಭಾಗ್ಯ.

ಕಚೇರಿಯಲ್ಲಿ ಕೂತು ಕೆಲಸ ಮಾಡಬೇಕಾದ ಸಚಿವರು ಮತ್ತು ಕ್ಷೇತ್ರದಲ್ಲಿ ಜನರ ಜೊತೆ ಇರಬೇಕಾದ ಬಿಜೆಪಿ ಶಾಸಕರು ದೆಹಲಿಯಿಂದ ಬಂದಿರುವ ಬಿಜೆಪಿ ಹೈಕಮಾಂಡ್ ಪ್ರತಿನಿಧಿ ಮುಂದೆ ಅಹವಾಲು ಸಲ್ಲಿಸಲು ಕ್ಯೂನಲ್ಲಿದ್ದಾರೆ. ಮುಖ್ಯಮಂತ್ರಿ ಪರ-ವಿರೋಧಿ ಬಣಗಳ ಕಿತ್ತಾಟದಲ್ಲಿ ಜನರ ನೋವನ್ನು ಕೇಳೋರು ಯಾರು? ಎಂದು ಪ್ರಶ್ನಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ, ಲಸಿಕೆ ನೀಡಿಕೆಯ ಕಾರ್ಯ ಕುಂಟುತ್ತಾ ಸಾಗಿದೆ, ಇನ್ನೊಂದೆಡೆ ಕೊರೊನಾ ಮೂರನೇ ಅಲೆಯ ಬಗ್ಗೆ ತಜ್ಞರು ನಿರಂತರವಾಗಿ ಎಚ್ಚರಿಸುತ್ತಿದ್ದಾರೆ. ಸಿಎಂ ತನ್ನ ಉಳಿವಿಗಾಗಿ ಹೋರಾಡುತ್ತಿದ್ದಾರೆ, ಜನರನ್ನು ಉಳಿಸುವರು ಯಾರು?

ಪಕ್ಷಾಂತರಿಗಳ ಅನೈತಿಕ ಬಲದಿಂದ ಬಂದ ಅಧಿಕಾರ ಅನುಭವಿಸುತ್ತಿರುವ ಬಿಜೆಪಿ ಮೂಲನಿವಾಸಿ ನಾಯಕರು ಈಗ ಅವರ ವಿರುದ್ಧವೇ ತಿರುಗಿ ಬಿದ್ದಿರುವುದು ಪ್ರಕೃತಿಯ ಸಹಜ ನ್ಯಾಯವೇ ಸರಿ. ಈಗಲೂ ಕಾಲ ಮಿಂಚಿಲ್ಲ, ಇಂತಹ ಅನೈತಿಕ ಬೆಂಬಲ ಬೇಡವೆಂದಾದರೆ ಪಕ್ಷಾಂತರಿಗಳನ್ನು ಕಿತ್ತು ಹಾಕಿ, ಯಾಕೆ ಗೋಳಾಡುತ್ತೀರಿ? ಎಂದು ಪಕ್ಷಾಂತರಿ ನಾಯಕರಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

ಕೊರೊನಾ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ರಾಜ್ಯಕ್ಕೆ ಸುಭದ್ರ ಸರ್ಕಾರದ ಅಗತ್ಯ ಇದೆ. BSY ಅವರನ್ನ ಇಟ್ಟುಕೊಳ್ತಿರಾ? ಅಥವಾ ಕಿತ್ತುಹಾಕ್ತೀರಾ? ಅದು ಬಿಜೆಪಿಗೆ ಸಂಬಂಧಿಸಿದ ವಿಚಾರ. ಆದರೆ ಶೀಘ್ರ ನಿರ್ಧಾರಕ್ಕೆ ಬಂದು ರಾಜ್ಯಕ್ಕೊಂದು ಸುಭದ್ರವಾದ ಸರ್ಕಾರ ಕೊಡಿ, ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ತೊಲಗಿಹೋಗಿ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Exit mobile version