ಗೋಹತ್ಯೆ ನಿಷೇಧ; ಸುಗ್ರೀವಾಜ್ಞೆ ಹೊರಡಿಸಲು ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು, ಡಿ. 16: ಗೋಹತ್ಯೆ ನಿಷೇಧ ಮಸೂದೆಗೆ ವಿಧಾನಪರಿಷತ್‍ನಲ್ಲಿ ಅಂಗೀಕಾರ ಪಡೆಯುವಲ್ಲಿ ವಿಫಲವಾಗಿರುವ ಕಾರಣ ಸುಗ್ರೀವಾಜ್ಞೆ ಮೂಲಕ ಮಸೂದೆಯನ್ನು ಜಾರಿಗೊಳಿಸಲು ಆಡಳಿತಾರೂಢ ಬಿಜೆಪಿ ಮುಂದಾಗಿದೆ. ವಿಧಾನಪರಿಷತ್ತಿನಲ್ಲಿ ವಿಧೇಯಕ ಅಂಗೀಕಾರಕ್ಕೆ ಅಡ್ಡಿ ಉಂಟಾದ ಕಾರಣಕ್ಕೆ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಹಸು, ಕರು ಮತ್ತು ಎಮ್ಮೆ ಸೇರಿದಂತೆ ದನಗಳನ್ನು ಅಕ್ರಮವಾಗಿ ಮಾರಾಟ ಮಾಡುವುದು, ಖರೀದಿಸುವುದು ಮತ್ತು ಸಾಗಿಸುವುದನ್ನು ನಿಷೇಧಿಸುವ ಮಸೂದೆಯನ್ನು ಕಳೆದ ವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಗೋಹತ್ಯೆ ನಿಷೇಧ ಕಾಯ್ದೆ ಇನ್ನೂ ವಿಧಾನ ಪರಿಷತ್‍ನಲ್ಲಿ ಮಂಡನೆಯಾಗಿಲ್ಲ. ಈ ಮೂಲಕ ವಿಧಾನಸಭೆಯಲ್ಲಿ ದಿಢೀರ್ ಎಂದು ಗೋಹತ್ಯೆ ನಿಷೇಧ ವಿಧೇಯಕವನ್ನು ಮಂಡನೆ ಮಾಡಿದ್ದ ರಾಜ್ಯ ಸರ್ಕಾರದ ಲೆಕ್ಕಾಚಾರ ವಿಧಾನ ಪರಿಷತ್‍ನಲ್ಲಿ ತಲೆ ಕೆಳಗಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ವಿಧಾನಪರಿಷತ್ ಸಭಾಪತಿ ಪ್ರತಾಶ್ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮೂಲಕ ರಾಜ್ಯ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞಾ ಮೂಲಕ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧವಾಗಲಿದ್ದು, ಇದರಿಂದ ರಾಜ್ಯದ ಒಳಗೆ ಮತ್ತು ಹೊರಗೆ ಗೋಮಾಂಸ ಆಮದು ಮತ್ತು ರಫ್ತು ಸಂಪೂರ್ಣ ನಿಷೇಧವಾಗಲಿದೆ. ಕಾಯ್ದೆ ಜಾರಿಗೆ ಬಂದರೆ ಜಾನುವಾರುಗಳ ವಧೆಗೆ ನಿಷೇಧ, ಗೋಮಾಂಸ ಮಾರಾಟ ಹಾಗೂ ಬಳಕೆಗೆ ನಿಷೇಧ, ರಾಜ್ಯಹಾಗೂ ಹೊರ ರಾಜ್ಯಗಳಿಗೆ ಜಾನುವಾರುಗಳ ಅಕ್ರಮ ಸಾಗಾಣಿಕೆ, ವಧೆಗಾಗಿ ಜಾನುವಾರಗಳ ಖರೀದಿ, ಮಾರಾಟ ಅಥವಾ ವಿಲೇವಾರಿಗೆ ಕಡಿವಾಣ ಬೀಳಲಿದೆ.

ಹಸು, ಕರು, ಎಮ್ಮೆ, ಎತ್ತು ಹಾಗೂ 13 ವರ್ಷ ಕೆಳಗಿನ ಕೋಣ ಹತ್ಯೆ ನಿಷೇಧ.ತಪ್ಪಿತಸ್ಥರಿಗೆ 3 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ,ಪ್ರತಿ ಗೋ ಹತ್ಯೆಗೆ 50,000 ದಿಂದ ಗರಿಷ್ಠ ಐದು ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು. ಗೋ ಹತ್ಯೆ ಉದ್ದೇಶಕ್ಕಾಗಿ ಅಂತಾರಾಜ್ಯ ಹಾಗೂ ರಾಜ್ಯದೊಳಗಡೆ ಗೋ ಸಾಗಾಟ ನಿಷೇಧವಿರಲಿದ್ದು, ಕೃಷಿ ಹಾಗೂ ಪಶುಸಂಗೋಪನೆ ಉದ್ದೇಶಕ್ಕಾಗಿ ಗೋ ಸಾಗಾಟ ಮಾಡಿದರೆ ಅದಕ್ಕೆ ಅಧಿಕಾರಿಗಳ ಅನುಮತಿ ಅಗತ್ಯ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಸಾಗಾಟ ಮಾಡಬೇಕು.

ಎಸ್‍ಐ ಶ್ರೇಣಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ತಪಾಸಣೆ ಹಾಗೂ ಮುಟ್ಟುಗೋಲು ಹಾಕಿಕೊಳ್ಳಲು ಕಾಯ್ದೆಯಲ್ಲಿ ಅಧಿಕಾರವಿದೆ. ಮುಟ್ಟುಗೋಲು ಹಾಕಿದ ಕೂಡಲೇ ಸಂಬಂಧಿತ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗೆ ವರದಿ ಮಾಡಬೇಕು. ಗೋ ಹತ್ಯೆಗೆ ಸಂಬಂಧಿಸಿದಂತೆ ಸಾಗಾಟ ಮಾಡಿದ ವಾಹನಗಳು ಹಾಗೂ ಇತರ ಸಲಕರಣೆಗಳನ್ನು ಆರೋಪಿಗೆ ಹಿಂದುರಿಗಿಸಲು ಬ್ಯಾಂಕ್ ಗ್ಯಾರಂಟಿ ನೀಡಬೇಕು. ಗೋಹತ್ಯೆ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ರಚನೆಗೆ ಅಧಿಕಾರ ನೀಡಲಾಗಿದೆ.

ಸಂಶೋಧನಾ ಉದ್ದೇಶಕ್ಕಾಗಿ ಬಳಸುವ ಗೋವುಗಳಿಗೆ ವಿನಾಯಿತಿ ಮತ್ತು ಪಶು ವೈದ್ಯಾಧಿಕಾರಿ ದೃಢೀಕರಿಸಿದ ಗೋ ಹತ್ಯೆ ಮಾಡಲು ಅವಕಾಶವಿದೆ. ಯಾವುದೇ ರೋಗಗಳಿಂದ ಬಳಲುತ್ತಿರುವ ಗೋವುಗಳ ಹತ್ಯೆಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಕರ್ನಾಟಕ ಪಶು ಕಲ್ಯಾಣ ಮಂಡಳಿ ಅಸ್ಥಿತ್ವಕ್ಕೆ ಬಂದಿದ್ದು, ಅದರ ಅಡಿಯಲ್ಲಿ ಯಾವುದೇ ರೀತಿಯ ಪ್ರಾಣಿ ಹಿಂಸೆಯನ್ನು ತಡೆಯಬಹುದಾಗಿದ್ದು, ಗೋ ಹತ್ಯೆ, ಗೋವುಗಳ ಅಕ್ರಮ ಸಾಗಾಟ, ಹಿಂಸೆ ತಡೆಯುವ ಬಗ್ಗೆ ಮಂಡಳಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.

ಕರ್ನಾಟಕ ಭೂ ಸುಧಾರಣಾ ಮಸೂದೆ 2020ನ್ನು ಪರಿಷತ್ತಿನಲ್ಲಿ ಅಂಗೀಕರಿಸುವಲ್ಲಿ ಸರ್ಕಾರವನ್ನು ಬೆಂಬಲಿಸಿದ್ದ ಜೆಡಿಎಸ್, ಪರಿಷತ್ತಿನ ಅಧ್ಯಕ್ಷರನ್ನು ಕೆಳಗಿಳಿಸುವ ಆಡಳಿತ ಪಕ್ಷದ ಪ್ರಯತ್ನಗಳಿಗೆ ತನ್ನ ಬೆಂಬಲ ವಿಸ್ತರಿಸಿದೆ, ಆದರೆ ಗೋಹತ್ಯೆ ನಿಷೇಧ ಮಸೂದೆಗೆ ಬೆಂಬಲ ನೀಡುವುದಿಲ್ಲ ಎಂಬುದನ್ನು ಜೆಡಿಎಸ್ ಸ್ಪಷ್ಟಪಡಿಸಿದೆ.

Exit mobile version