ಆಸ್ಪತ್ರೆಯ ಮುಂದೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಮದ್ಯದ ಬಾಟಲಿಗಳು! ಎಲ್ಲಿದ್ದೀರಿ ಅಧಿಕಾರಿಗಳೇ?

ಚಿಂತಾಮಣಿ: ಆಸ್ಪತ್ರೆ ಗೇಟ್ ಒಳಗೆ ಹೋದರೆ ಸಾಕು ಇಲ್ಲಿ ಕಾಣಿಸೋದು ಸ್ವಚ್ಛತೆ ಅಲ್ಲ, ಬದಲಿಗೆ ರಾಶಿ ರಾಶಿ ಬಿಯರ್ ಬಾಟಲಿಗಳು. ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ಹೋದರೆ ಸಾಕು ಮದ್ಯದ ಅಂಗಡಿಯಂತೆ ಬಿಯರ್ ಬಾಟಲಿಗಳು ತುಂಬಿ ಹೋಗಿವೆ. ಎಲ್ಲಿ ನೋಡಿದರೂ ಮದ್ಯದ ಬಾಟಲ್ ಗಳು ಚೆಲ್ಲಾಪಿಲ್ಲಿಯಾಗಿ ಆಸ್ಪತ್ರೆಯೊಳಗೆ ಬಿದ್ದಿವೆ. ಮದ್ಯಪ್ರಿಯರು ರಾತ್ರಿ ವೇಳೆ ಆಸ್ಪತ್ರೆಯೊಳಗೆ ಬಂದು ಮದ್ಯದ ಅಂಗಡಿ ಮಾಡಿಕೊಂಡಿದ್ದಾರೆ. ಇಲ್ಲಿನ ಆವರಣವನ್ನು ಬಾರ್ ಮಾಡಿಕೊಂಡಿರುವ ಹುಚ್ಚು ಎಣ್ಣೆ ಪ್ರೀಯರು ಆಸ್ಪತ್ರೆಯನ್ನು ಕಸದ ತೊಟ್ಟಿ ಮಾಡಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಕುರುಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮದ್ಯಪ್ರಿಯರು ರಾತ್ರಿ ವೇಳೆ ಕಾಂಪೌಂಡ್ ಒಳಗಡೆ ನುಗ್ಗಿ, ಎಣ್ಣೆ ಪಾರ್ಟಿ ಮಾಡಿ ಕುಡಿಯುವುದಲ್ಲದೆ, ಖಾಲಿ ಬಾಟಲಿ ಒಡೆದು ಹೋಗುವ ಕೆಲಸವನ್ನು ಶುರು ಮಾಡಿಕೊಂಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳು ಈ ತೊಂದರೆಯಿಂದ ಕಂಗಾಲಾಗಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಈ ರೀತಿ ಗಾಜಿನ ಚೂರು ಹೊಡೆದು ಹಾಕಿದರೆ ಏನು ಮಾಡಬೇಕು ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಪೂರ್ಣಿಮಾ ರವರು ಮಾಧ್ಯಮದವರೊಂದಿಗೆ ತಿಳಿಸಿದ್ದಾರೆ.

ಆಸ್ಪತ್ರೆಯ ಆವರಣದಲ್ಲಿ ಆಶಾ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳ ಕಾರ್ಯಕ್ರಮವೊಂದು ಇದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯರಾದ ಅಫ್ಸರ್ ಪಾಷಾ, ಆನೂರು ಸುಮಿತ್ರಮ್ಮ, ಚಿಮನಹಳ್ಳಿ ಸರಸ್ವತಮ್ಮ, ವೆಂಕಟೇಶಪ್ಪ, ಶ್ರೀನಿವಾಸ್ ,ಮದ್ಯದ ಬಾಟಲ್ ಗಳ ಗಾಜಿನ ಚೂರುಗಳು ನೋಡಿ ಬೇಸರ ವ್ಯಕ್ತಪಡಿಸಿ, ಮಾಧ್ಯಮಕ್ಕೆ ವರದಿ ನೀಡಿದ್ದಾರೆ. ರೋಗವನ್ನು ಗುಣಪಡಿಸಿಕೊಳ್ಳಲು ಬರುವ ರೋಗಿಗಳು ಒಂದೆಡೆ ಆದರೆ, ಮದ್ಯಪಾನ ಮಾಡಲು ಆಸ್ಪತ್ರೆಯನ್ನು ಬಾರ್ ಮಾಡಿಕೊಂಡಿರುವ ಮಂದಿ ಮತ್ತೊಂದೆಡೆ.

ಆಸ್ಪತ್ರೆ ಆವರಣದಲ್ಲಿ ಎಲ್ಲೆಂದರಲ್ಲಿ ಕುಳಿತು ಮದ್ಯ ಸೇವಿಸುವುದರಿಂದ ಹತ್ತಿರದಲ್ಲಿ ಇರುವ ಮನೆಗಳ ಮಹಿಳೆಯರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈ ವಿಚಾರವಾಗಿ ಜಾಗೃತಿ ವಹಿಸಿ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು! ಮದ್ಯ ವ್ಯಸನಿಗಳಿಗೆ ಎಚ್ಚರಿಕೆ ನೀಡಿ ತಕ್ಕ ಪಾಠವನ್ನು ಕಲಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

Exit mobile version