ಫಾರೆಸ್ಟ್ ಲ್ಯಾಂಡ್ ಇನ್ಮುಂದೆ ಜನಬಳಕೆಯ ಮರ ಉದ್ಯಾನ ಮಾಡಲು ಮುಂದಾದ ಸರ್ಕಾರ

ಬೆಂಗಳೂರು, ಫೆ. 11: ಬೆಂಗಳೂರು ಮಹಾನಗರಿಗೆ ದಟ್ಟದಾದ ಅರಣ್ಯ ಪ್ರದೇಶವಿದೆ. ಆದರೆ ಈ ಫಾರೆಸ್ಟ್ ಲ್ಯಾಂಡ್ ಇನ್ಮುಂದೆ ಜನಬಳಕೆಯ ಮರ ಉದ್ಯಾನ ಮಾಡಲು ಸರ್ಕಾರ ಮುಂದಾಗಿದೆ. ಟ್ರೀ ಪಾರ್ಕ್‌ನಿಂದ ಅರಣ್ಯ ಸಂಕುಲಕ್ಕೆ ಸಂಕಷ್ಟವಾಗುತ್ತಿದೆ ಎಂದು ಪರಿಸರವಾದಿ, ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು, ಸೇವ್ ಫಾರೆಸ್ಟ್ ಅಭಿಯಾನವೇ ಶುರುವಾಗಿದೆ. ಬೆಂಗಳೂರಿನಿಂದ 20 ಕಿಲೋಮೀಟರ್ ಸಮೀಪದಲ್ಲಿದೆ ತುರಹಳ್ಳಿ ಅರಣ್ಯ ಪ್ರದೇಶ. ಕನಕಪುರ ರಸ್ತೆ ಸಮೀಪ, ಮೆಟ್ರೋ ರೈಲಿಗೂ ಹತ್ತಿರದಲ್ಲಿರುವ ಏಕೈಕ ಅರಣ್ಯ ಪ್ರದೇಶವಿದು. ಆದರೀಗ ಈ ಕಿರು ಹಾಗೂ ಮೀಸಲಿಟ್ಟ ಅರಣ್ಯ ಪ್ರದೇಶ ಇನ್ಮುಂದೆ ಟ್ರೀ ಪಾರ್ಕ್ ಮಾಡಲು ಸರ್ಕಾರ ಮುಂದಾಗುತ್ತಿದೆ. ತುರಹಳ್ಳಿ ಅರಣ್ಯ ಪ್ರದೇಶದಲ್ಲಿರುವ ಒಂದಲ್ಲ, ಎರಡಲ್ಲ ಬರೋಬ್ಬರಿ 200ಕ್ಕೂ ಹೆಚ್ಚು ಎಕರೆ ಜಾಗವನ್ನು ಟ್ರೀ ಪಾರ್ಕ್ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ.

ಜನರ ಓಡಾಟವೇ ಇರದ ಅರಣ್ಯದಲ್ಲೀಗ ಜನರಿಗೆ ಓಡಾಡಲು ಅವಕಾಶ ಕೊಟ್ಟಿರುವುದು, ಸಸ್ಯ, ಗಿಡಮರ, ಪಕ್ಷಿಗಳಿಗೆ ಸಂಕಷ್ಟ ತಂದಿರುವುದಕ್ಕೆ ಸ್ಥಳೀಯರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಸೇವ್ ತುರಹಳ್ಳಿ ಫಾರೆಸ್ಟ್ ಅಭಿಯಾನ ಆರಂಭವಾಗಿದ್ದು, ಟ್ವಿಟರ್, ಮಿಸ್ಕಾಲ್ ಮಾಡಿ ಅಭಿಯಾನ ಮಾಡಲಾಗುತ್ತಿದೆ. ಸರ್ಕಾರಕ್ಕೆ ಟ್ರೀ ಪಾರ್ಕ್ ಹಿಂಪಡೆಯುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ.

ಟ್ರೀ ಪಾರ್ಕ್ ಎಂದರೇನು?

ಕಿರು ಇಲ್ಲವೇ ಮೀಸಲು ಅರಣ್ಯ ಪ್ರದೇಶದಲ್ಲಿ ವಾಯುವಿಹಾರ, ಯೋಗ, ಮಕ್ಕಳ ವನ ನಿರ್ಮಾಣ, ಜಿಮ್, ವಾಚ್ ಟವರ್, ಶೌಚಾಲಯ, ಜನರು ಅಲ್ಲಿ ಕಾಲ ಕಳೆಯಲು ಕಟ್ಟಡ ನಿರ್ಮಾಣ, ಲಾಲ್ ಬಾಗ್, ಕಬ್ಬನ್ ಪಾರ್ಕ್ ರೀತಿ ಉದ್ಯಾವನವನ್ನಾಗಿ ರೂಪಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ.

ಟ್ರೀ ಪಾರ್ಕ್ ನಿರ್ಮಿಸಲು ವಿರೋಧವೇಕೆ?

ಬೆಂಗಳೂರಿಗೆ ಅಂಟಿಕೊಂಡಿರುವ ಅತಿ ದೊಡ್ಡ ಅರಣ್ಯ ಪ್ರದೇಶವಾದ ಇಲ್ಲಿ ಜನಬಳಕೆ ಶುರುವಾದ್ರೆ ಅರಣ್ಯ ಪ್ರದೇಶ ಉಳಿಯಲ್ಲ. ಜನ ಬಳಕೆಯ ಹೆಸರಿನಲ್ಲಿ ನಡೆಯುವ ಕಾಂಕ್ರಿಟ್ ಕಾಮಗಾರಿಗಳಿಂದ ಅರಣ್ಯ ಸಂಕುಲಕ್ಕೆ ತೊಂದರೆ ಆಗುತ್ತದೆ. ನವಿಲು ಇತ್ಯಾದಿ ಪಕ್ಷಿ, ಪ್ರಾಣಿಗಳ ಆವಾಸ, ಜೀವನಶೈಲಿಗೆ ಧಕ್ಕೆ ಆಗುತ್ತದೆ. ನಗರದೊಳಗೆ ಉಳಿದಿರುವ ಏಕೈಕ ಕಾಡಿನ ಪ್ರದೇಶವೂ ಅಂತಿಮವಾಗಿ ಅವಸಾನವಾಗುತ್ತದೆ ಎಂಬುದು ಹೋರಾಟಗಾರರ ಆತಂಕ.

ರಾಜ್ಯಸರ್ಕಾರದ ವಿಷನ್ 22ರಲ್ಲಿ ಟ್ರೀ ಪಾರ್ಕ್ ಪ್ರಸ್ತಾಪ ಮಾಡಲಾಗಿದೆ. ವಿಷನ್ 2020 ಅಡಿ, ನಗರವನ ಯೋಜನೆಯಲ್ಲಿ ಟ್ರೀ ಪಾರ್ಕ್ ಮಾಡಲು ಉದ್ದೇಶಿದ್ದು, 500ಕ್ಕೂ ಹೆಚ್ಚು ಎಕರೆಯ ಅರಣ್ಯ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಎಕರೆ ಜಾಗದಲ್ಲಿ ಟ್ರೀ ಪಾರ್ಕ್ ಮಾಡಲು ಸರ್ಕಾರ ಉತ್ಸುಕವಾಗಿದೆ. ಕಾಡುಗೋಡಿ 102 ಎಕರೆ, ಮಾಚೋಹಳ್ಳಿ  98 ಎಕರೆ ಟ್ರೀ ಪಾರ್ಕ್ ಮಾಡಲು ತಯಾರಿಯೂ ಮಾಡಿಕೊಂಡಿದೆ ಎಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.

ಮೊದಲ ಹಂತದಲ್ಲಿ ಇದೇ ಜೂನ್ ವೇಳೆ ಟ್ರೀ ಪಾರ್ಕ್ ಮಾಡಲು ತಯಾರಿ ನಡೆದಿದೆ. ಈಗಾಗಲೇ ತುರುಹಳ್ಳಿಯಲ್ಲಿ ಸರ್ಕಾರ 37 ಎಕರೆ ಜಾಗದಲ್ಲಿ ಟ್ರೀ ಪಾರ್ಕ್ ಮಾಡಿದೆ. 2011ರಲ್ಲಿ ಅಂದಿನ ಸಿಎಂ ಸದಾನಂದ ಗೌಡ ಅವರು ಟ್ರೀ ಪಾರ್ಕ್ ಉದ್ಘಾಟಿಸಿದ್ದರು. ಈಗಾಗಲೇ 37 ಎಕರೆ ಟ್ರೀ ಪಾರ್ಕ್ ಮಾಡಿರುವ ಸರ್ಕಾರ ಇದಕ್ಕೆ ಹೆಚ್ಚಿನ ಅಭಿವೃದ್ದಿ ಮಾಡುವುದರ ಬದಲು ಉಳಿದ ಅರಣ್ಯ ಪ್ರದೇಶದಲ್ಲಿ ಮರ ಉದ್ಯಾನ ಮಾಡಲು ಮುಂದಾಗಿರುವುದಕ್ಕೆ ಸ್ಥಳೀಯರು  ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಈಗಾಗಲೇ 37 ಎಕರೆ ಟ್ರೀ ಪಾರ್ಕ್ ಮಾಡಲಾಗಿದೆ. ತುರಹಳ್ಳಿ ಅರಣ್ಯದ ಉಳಿದೆಡೆ ಟ್ರೀ ಪಾರ್ಕ್ ಪ್ರಸ್ತಾವನೆ ಸಲ್ಲಿಸಲಾಗಿದೆ. 50 ಎಕರೆಯಷ್ಟೇ ಟ್ರೀ ಪಾರ್ಕ್ ಮಾಡಲಾಗುವುದು. ಯಾವುದೇ ಸಂಕುಲಕ್ಕೆ ತೊಂದರೆಯಾಗದಂತೆ ಟ್ರೀ ಪಾರ್ಕ್ ಮಾಡಲಾಗುವುದು ಎಂದು ಈ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಇದೇ ವೇಳೆ, ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಟ್ರೀ ಪಾರ್ಕ್ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ #SaveTurahalliForest #TreeParkBeda ಎಂಬ ದೊಡ್ಡ ಅಭಿಯಾನವೇ ರೂಪುಗೊಂಡಿದೆ. ಆನ್ಲೈನ್ನಲ್ಲಿ ಪೆಟಿಶನ್ ಸೇರಿದಂತೆ ವಾಕಥಾನ್ ಇತ್ಯಾದಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ.

Exit mobile version