ಗ್ರಾಮ ಪಂಚಾಯಿತಿ ಫಲಿತಾಂಶ ಸಮಾಧಾನ ತಂದಿದೆ; ಡಿ.ಕೆ. ಶಿವಕುಮಾರ್

ಬೆಂಗಳೂರು, ಡಿ. 31: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇನ್ನು ಪೂರ್ಣ ಪ್ರಮಾಣದಲ್ಲಿ ಬರಬೇಕಿದೆ. ಈವರೆಗಿನ ಫಲಿತಾಂಶದಲ್ಲಿ ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳ ಸಾಧನೆ ಸಮಾಧಾನ ತಂದಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಚುನಾವಣಾ ಆಯೋಗ ಈ ಫಲಿತಾಂಶವನ್ನು ಯಾವುದೇ ಪಕ್ಷ ತಮ್ಮ ಗೆಲುವು ಎಂದು ಬಿಂಬಿಸಿಕೊಳ್ಳುವಂತಿಲ್ಲ ಎಂದು ವ್ಯಾಖ್ಯಾನ ನೀಡಿದೆ. ಮುಂದೆ ಜಿಲ್ಲಾ ಕಾಂಗ್ರೆಸ್ ಕಡೆಯಿಂದ ವರದಿ ತರಿಸಿಕೊಳ್ಳುತ್ತೇನೆ.

ನನ್ನ ಕ್ಷೇತ್ರದಲ್ಲೇ ಬಿಜೆಪಿ ಗೆದ್ದಿದೆ ಎಂದು ಹೇಳುತ್ತಿದ್ದೀರಿ. ಅಲ್ಲೇ ಹೋಗಿ ಯಾವ ಪಕ್ಷ ಬಂದಿದೆ ಎಂದು ನೋಡೋಣ ಬನ್ನಿ. ನಾವು ಅವಿರೋಧವಾಗಿ ಆಯ್ಕೆ ಮಾಡುವ ಶಕ್ತಿ ಇದ್ದರೂ ಸ್ಪರ್ಧೆ ಇರಲಿ ಎಂದು ಸುಮ್ಮನೆ ಇದ್ದೇವೆ. ಬಿಜೆಪಿಯಲ್ಲಿ ಯಾವ ಆಂತರಿಕ ಸಮಸ್ಯೆ ಇದೆಯೋ ಗೊತ್ತಿಲ್ಲ ಹೀಗಾಗಿ ಅವರು ಈ ರೀತಿ ಗೆದ್ದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ರಚನೆಯಾಗಲಿ ಯಾರು ಗೆದ್ದಿದ್ದಾರೆ ಎಂದು ಗೊತ್ತಾಗುತ್ತದೆ. ನಾವು ನಮ್ಮ ಸ್ಥಳೀಯ ನಾಯಕರಿಗೆ ಜವಾಬ್ದಾರಿ ವಹಿಸಿ ಚುನಾವಣೆ ಮಾಡಿದ್ದೇವೆ.

ನಮ್ಮ ಸರ್ಕಾರ ಇದ್ದಾಗ ಗೆದ್ದ ಉಪಚುನಾವಣೆಗಳಲ್ಲಿ ಗೆದ್ದ ಪಟ್ಟಿಯನ್ನು ನಾನು ನೀಡುತ್ತೇನೆ. ಆದರೆ ನಂತರ ಏನಾಯ್ತು? ಮುಂದಿನ ಬಾರಿಯೂ ಅದೇ ಆಗಲಿದೆ.

2021 ನಮ್ಮ ಕಾರ್ಯಕರ್ತರ ಪಾಲಿಗೆ ಹೋರಾಟದ ವರ್ಷ. ಪ್ರತಿ ಕ್ಷೇತ್ರದ ಸಮಸ್ಯೆ ಚರ್ಚಿಸಿ ಹೋರಾಟ ಮಾಡುತ್ತೇವೆ. ಯತ್ನಾಳ್ ಅವರು ಹಿರಿಯ ನಾಯಕರು. ಅವರುಂಟು ಅವರ ಸಿಎಂ ಉಂಟು, ಅವರ ಬಗ್ಗೆ ನಾವು ಪ್ರತಿಕ್ರಿಯೆ ನೀಡಲ್ಲ.

ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳು. 2020ರ ವರ್ಷ ಇಡೀ ಪ್ರಪಂಚದ ಜನ ನರಕವನ್ನು ಅನುಭವಿಸಿದೆ. ನಾವ್ಯಾರು ಈ ಪಿಡುಗನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೂ ಜನ ಧೈರ್ಯವಾಗಿ ಈ ಮಹಾಮಾರಿ ವಿರುದ್ಧ ಹೋರಾಟ ಮಾಡಿದ್ದಾರೆ. 2021ರ ವರ್ಷ ಎಲ್ಲರಿಗೂ ನೆಮ್ಮದಿ, ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

Exit mobile version