ರಾಜನಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಸುಸಜ್ಜಿತ ಗ್ರಂಥಾಲಯ!

library

ರಾಜನಕುಂಟೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಗ್ರಂಥಾಲಯ. ಸಾಮಾನ್ಯವಾಗಿ ಪ್ರತಿ ಗ್ರಾಮಪಂಚಾಯಿತಿಯಲ್ಲೂ ಒಂದೊಂದು ಗ್ರಂಥಾಲಯಗಳಿರುತ್ತವೆ. ಆದರೆ ಹೆಚ್ಚಿನ ಗ್ರಂಥಾಲಯಗಳು ಸೂಕ್ತ ಕಟ್ಟಡಗಳಿಲ್ಲದೆ ಅಲ್ಲಿ ಓದಲು ಪೂರಕ ವಾತಾವರಣವಿಲ್ಲದ ಕಾರಣದಿಂದ ಬಹಳಷ್ಟು ಜನ, ವಿಶೇಷವಾಗಿ ವಿಧ್ಯಾರ್ಥಿಗಳು ಅಲ್ಲಿ ಹೋಗಿ ಓದಲು ಹೆಚ್ಚು ಉತ್ಸಾಹ ತೋರುವುದಿಲ್ಲ. ಇತ್ತೀಚಿನ ಪ್ರತಿ ಉದ್ಯೋಗಕ್ಕೂ ಸ್ಪರ್ಧಾತ್ಮಕ ಪರೀಕ್ಷೆಗಳಿರುವುದರಿಂದ ವಿದ್ಯಾರ್ಥಿಗಳು ಉದ್ಯಮ ಪಡೆಯಲು ಹಗಲು ರಾತ್ರಿ ತಪಸ್ಸಿನ ರೀತಿ ಓದಬೇಕಿದೆ. ಈ ಹಿನ್ನಲೆಯಲ್ಲಿ ಇತ್ತೀಚೆಗೆ ನಗರ ಪ್ರದೇಶಗಳಲ್ಲಿ 24×7 ಮಾದರಿಯ ಸುಸಜ್ಜಿತ ಖಾಸಗಿ ಗ್ರಂಥಾಲಯಗಳು ತಲೆ ಎತ್ತಿವೆ.

ಆ ಗ್ರಂಥಾಲಯಗಳಲ್ಲಿ ಓದಲು ಯಾವುದೇ ಪುಸ್ತಕಗಳಿರುವುದಿಲ್ಲ, ಅಲ್ಲಿಗೆ ಹೋಗುವ ವಿಧ್ಯಾರ್ಥಿಗಳೇ ಪುಸ್ತಕ ತೆಗೆದುಕೊಂಡು ಹೋಗಬೇಕು. ಅಲ್ಲಿ ಕೇವಲ ಉತ್ತಮ ಗಾಳಿ, ಬೆಳಕಿರುವ ಕೊಠಡಿ, ಕುರ್ಚಿ, ಮೇಜು, ಕೆಲವು ಕಡೆ ವೈಫೈ ವ್ಯವಸ್ಥೆ ಇರುತ್ತದೆ. ಇಂತಹ ವ್ಯವಸ್ಥೆ ನಮ್ಮ ಗ್ರಾಮಪಂಚಾಯಿತಿಯ ಸಾರ್ವಜನಿಕ ಗ್ರಂಥಾಲಯಗಳಲ್ಲೂ ಬಂದರೆ ಓದುಗರಿಗೆ, ವಿಶೇಷವಾಗಿ ಗ್ರಾಮೀಣ ಭಾಗದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಅಂಶಗಳ ಹಿನ್ನಲೆಯಲ್ಲಿ ನೋಡಿದಾಗ ಈ ರಾಜನಕುಂಟೆಯ‌ ಗ್ರಾಮಪಂಚಾಯಿತಿಯ ಈ ಸಾರ್ವಜನಿಕ ಗ್ರಂಥಾಲಯ ಇತರ ಎಲ್ಲಾ ಗ್ರಂಥಾಲಯಗಳಿಗೂ ಮಾದರಿಯಾಗಿದೆ.

ಇಲ್ಲಿ ಪ್ರತ್ಯೇಕ ಕಂಪ್ಯೂಟರ್ ವಿಭಾಗ, ದಿನಪತ್ರಿಕೆ ಮತ್ತು ನಿಯತಕಾಲಿಕೆ ವಿಭಾಗ, ಅಧ್ಯಯನ ವಿಭಾಗ ಎಂದು ವ್ಯವಸ್ಥಿತವಾಗಿ ವಿಭಾಗಿಸಿಲಾಗಿದೆ. ಅಲ್ಲದೇ ಪರೀಕ್ಷಾ‌ಸಮಯದಲ್ಲಿ ವಿದ್ಯಾರ್ಥಿಗಳ ಕೋರಿಕೆ ಇದ್ದರೆ ಅವರಿಗೆ ರಾತ್ರಿ ಅಲ್ಲಿಯೇ ಉಳಿದು ಓದಲು ವ್ಯವಸ್ಥೆ ಮಾಡಲಾಗಿದೆ. ಇಂತಹ ಗ್ರಂಥಾಲಯಗಳು ಎಲ್ಲಾ ಗ್ರಾಮಗಳಲ್ಲಿಯೂ ಸ್ಥಾಪನೆಯಾಗಬೇಕು. ಆ ಮೂಲಕ ಹಳ್ಳಿಗಳಲ್ಲಿಯೂ ನಗರ ಪ್ರದೇಶದ ಸೌಲಭ್ಯಗಳು‌ ದೊರೆತು, ಗ್ರಾಮೀಣ ಭಾಗದ ವಿಧ್ಯಾರ್ಥಿಗಳು ನಗರ ಪ್ರದೇಶದ ವಿಧ್ಯಾರ್ಥಿಗಳಿಗಿಂತ ಯಾವುದಾದರಲ್ಲೂ‌ ಕಡಿಮೆ ಇಲ್ಲದಂತೆ ಓದಿ ಒಳ್ಳೆಯ ಹುದ್ದೆಗಳಿಗೆ ಹೋಗಬೇಕು.

Source : ಪರಿಸರ ಪರಿವಾರ

Photo credits : Uma mahadevan (via Twitter)

Exit mobile version