ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರ ಅಂಗಡಿಗಳನ್ನು ನಿಷೇಧಿಸುವುದು ಎಷ್ಟು ಸರಿ? ಇದು ತಪ್ಪು. ಹಿಂದುತ್ವದ ಹೆಸರಿನಲ್ಲಿ ಶಾಂತಿ, ಸಾಮರಸ್ಯ ಕದಡುವ ಕೆಲಸ ರಾಜ್ಯದಲ್ಲಿ ನಡಿತಿದೆ ಎಂದು ಹಾಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಆರೋಪಿಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ನಾನು ಕಂಡ ಹಾಗೆ ಎಲ್ಲಿಯೂ ಕೂಡ ಹಿಂದುತ್ವದ ಕುರಿತು ಮಾತನಾಡುವುದಿಲ್ಲ! ಆದ್ರೆ, ಅದೇ ನಮ್ಮ ಕರ್ನಾಟಕ ರಾಜ್ಯದಲ್ಲಿ ಪ್ರತ್ಯೇಕವಾಗಿ ಹಿಂದುತ್ವದ ಬಗ್ಗೆ ಕೆಣಕಿ ಮಾತನಾಡುತ್ತಾರೆ. ಹಿಂದುತ್ವದ ಹೆಸರಿನಲ್ಲಿ ಶಾಂತಿ, ಸಾಮರಸ್ಯ ಕದಡುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು, ಪ್ರತಿ ಪಕ್ಷಗಳ ಸಿದ್ದಾಂತಗಳು ಕೂಡ ಸರಿಯಿವೆ. ಆದ್ರೆ, ಪಕ್ಷದ ಮುಖಂಡರು ಪಕ್ಷದ ಹೆಸರನ್ನು ಉಪಯೋಗಿಸಿಕೊಂಡು ಸಮಾಜದಲ್ಲಿ ಶಾಂತಿಯನ್ನು ಧ್ವಂಸ ಮಾಡುತ್ತಿದ್ದಾರೆ. ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರ ಅಂಗಡಿಗಳನ್ನು ನಿಷೇಧಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಮುಸ್ಲಿಂಮರು ಕೂಡ ಈ ದೇಶದ ಪ್ರಜೆಗಳು ಅಲ್ವಾ?
ಇದು ತಿಳಿದಿದ್ದರೂ ಯಾಕೆ ಈ ರೀತಿಯ ನಡೆ? ಎಲ್ಲರನ್ನೂ ಒಟ್ಟಾಗಿ ಕೂಡಿಸಿಕೊಂಡು ಸಾಗುವ ಜವಾಬ್ದಾರಿ ಸರ್ಕಾರದ್ದು, ಆದ್ರೆ ಈ ವಿಷಯದಲ್ಲಿ ಸರ್ಕಾರವೇ ತಪ್ಪು ಮಾಡುತ್ತಿದೆ! ವಿಶ್ವದ ನಾನಾ ರಾಷ್ಟ್ರಗಳಲ್ಲಿ ನಮ್ಮ ದೇಶದ ಪ್ರಜೆಗಳು ಕೆಲಸ ನಿರ್ವಹಿಸುತ್ತಿದ್ದಾರೆ. ನಮ್ಮಲ್ಲಿ ಮಾಡಿದಂತೆ ಮುಸ್ಲಿಂ ರಾಷ್ಟ್ರದಲ್ಲಿ ಏನಾದರೂ ಹಿಂದುಗಳನ್ನು ತೆಗೆದು ಹೊರ ನೂಕಿದರೆ ಅವರಿಗೆಲ್ಲಾ ಇಲ್ಲಿ ಕೆಲಸ ಕೊಡಲು ನಿಮಗೆ ಶಕ್ತಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ.