ವಿವಾದಾತ್ಮಕ ಹೇಳಿಕೆಗೆ ಕೊನೆಗೂ ಕ್ಷಮೆ ಯಾಚಿಸಿದ ಹಂಸಲೇಖ

ಬೆಂಗಳೂರು ನ 15 : ಪೇಜಾವರ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಹಂಸಲೇಖ ಅವರು ಕೊನೆಗೂ ತಮ್ಮ ಹೇಳಿಕೆಯ ಬಗ್ಗೆ ವಿಡಿಯೋ ಮುಖೇನ ಕ್ಷಮೆಯಾಚಿಸಿದ್ದಾರೆ.

ವಿಡಿಯೋ ಮೂಲಕ ಕ್ಷಮೆಯಾಚಿಸಿರುವ ಹಂಸಲೇಖ ಅವರು, ನನಗೆ ಗೊತ್ತಿದೆ ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ, ತಪ್ಪು ಆ ವೇದಿಕೆಯಲ್ಲಿ ನುಡಿದರೆ ಮುತ್ತಿನಹಾರದಂತಿರಬೇಕು ಎಂದು ಇರಬೇಕಿತ್ತು. ಆದರೆ ನನ್ನಿಂದ ತಪ್ಪಾಗಿದೆ. ಅಸ್ಪ್ರಶ್ಯತೆ ಎಂಬುದು ನಮ್ಮ ದೇಶಕ್ಕೆ ಅಂಟಿದ ಶಾಪ. ಈ ಅನಿಷ್ಠವನ್ನು ತೊಡೆದು ಹಾಕುವುದಕ್ಕೆ ಪೇಜಾವರರಂಥಹ ಗುರು ಹಿರಿಯರು ಅಪಾರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಬಗ್ಗೆ ನನಗೆ ಆ ಬಗ್ಗೆ ಅಪಾರ ಗೌರವವಿದೆ ಎಂದಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ನಾದಬ್ರಹ್ಮ ಹಂಸಲೇಖ ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದರು. ಮೇಲುಜಾತಿ ಹಾಗೂ ಕೀಳುಜಾತಿ, ಜಾತಿತಾರತಮ್ಯ, ಜಾತಿ ಪಿಡುಗು ವಿಚಾರವಾಗಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಳಿಕ ಅಂಬೇಡ್ಕರ್ ವಿಚಾರವನ್ನು ಕೂಡ ಉಲ್ಲೇಖಿಸಿದ್ದರು. ಇಲ್ಲಿ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿತ್ತು.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರು ಹಂಸಲೇಖ ಮಾತುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರು ವಿಡಿಯೋ ಮುಖಾಂತರ ಕ್ಷಮೆ ಕೇಳಿದ್ದಾರೆ.

Exit mobile version