ಸಾಮಾಜಿಕ ಕಾರ್ಯಕರ್ತೆ‌ ದಿಶಾ ರವಿ ಬಂಧನಕ್ಕೆ ಕೈ ನಾಯಕರ ಆಕ್ರೋಶ

ಬೆಂಗಳೂರು, ಫೆ, 15: ಸಾಮಾಜಿಕ ಕಾರ್ಯಕರ್ತೆ ದಿಶಾ ರವಿ ಅವರ ಬಂಧನ ಕುರಿತು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, ದಿಶಾ ರವಿ ಅವರ ಬಂಧನ ವಿಷಯ ತಿಳಿದು ಬಹಳ ಬೇಸರವಾಯಿತು. ಈ ದೇಶದಲ್ಲಿ ರೈತರನ್ನು ಬೆಂಬಲಿಸುವುದೂ ದೇಶದ್ರೋಹವೇ ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಳ್ವಿಕೆಯಲ್ಲಿ ಸಂವಿಧಾನಬದ್ಧ ಹಕ್ಕುಗಳು, ಕಾನೂನುಗಳು ಉಲ್ಲಂಘನೆಯಾಗುತ್ತಿವೆ ಎಂಬುದಕ್ಕೆ ಇದು ಒಂದು ಸ್ಪಷ್ಟ ಉದಾಹರಣೆಯಾಗಿದೆ. ದಿಲ್ಲಿ ಪೊಲೀಸರ ನಡೆಯು ರಾಜಕೀಯಪ್ರೇರಿತವಾಗಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಇದೇ ವಿಷಯದ ಕುರಿತು ಟ್ವೀಟ್ ಮಾಡಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್, ರೈತರನ್ನು ಬೆಂಬಲಿಸಿ ಟೂಲ್‌ಕಿಟ್ ತಿದ್ದಿದ ದಿಶಾ ರವಿಯ ಅಪರಾಧವಾದರೂ ಏನು? ಈ ಸರ್ಕಾರದ ಪ್ರಕಾರ ರೈತರ ಹೋರಾಟವನ್ನು ಬೆಂಬಲಿಸುವವರೆಲ್ಲಾ ಉಗ್ರಗಾಮಿಗಳೆ? ಈ ಕೇಂದ್ರ ಸರ್ಕಾರಕ್ಕೆ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥವೇನಾದರೂ ಗೊತ್ತಿದೆಯೆ? ಈ ಸರ್ಕಾರಕ್ಕೂ ತಾಲಿಬಾನ್ ಮಾದರಿಯ ಸರ್ಕಾರಕ್ಕೂ ಏನಾದರೂ ವ್ಯತ್ಯಾಸವಿದೆಯೆ? ಎಂದು ಪ್ರಶ್ನಿಸಿದ್ದಾರೆ.

Exit mobile version