ಕೈಗಳಿಗಾದ ಟ್ಯಾನಿಂಗ್ ತೆಗೆದುಹಾಕುವ ಮನೆಮದ್ದುಗಳಿವು…

ಸೂರ್ಯನ ಬಿಸಿಲು ದೇಹಕ್ಕೆ ಬಿದ್ದಾಗ, ನಮ್ಮ ಚರ್ಮವು ಕಂದು ಬಣ್ಣಕ್ಕೆ ತಿರುಗುವುದನ್ನು ಕಂಡಿರುತ್ತೀರಿ. ದೇಹವನ್ನು ಹೇಗೋ ವಿಭಿನ್ನ ಬಟ್ಟೆ ಧರಿಸಿ, ರಕ್ಷಿಸಿಕೊಳ್ಳಬಹುದು ಆದರೆ, ನಮ್ಮ ಕೈಗಳನ್ನು ಸೂರ್ಯನ ಬಿಸಿಲಿನಿಂದ, ಅದರ ಹಾಣಿಕಾರಕ ಕಿರಣಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಫುಲ್ ಸ್ಲೀವ್ ಬಟ್ಟೆ ಧರಿಸಿದ್ದರೂ, ಒಂದಲ್ಲ ಒಂದು ಕೈಯ ಭಾಗ ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನೇ ನಾವು ಟ್ಯಾನ್ ಎನ್ನುವುದು. ಹೀಗೆ ಟ್ಯಾನ್ ಆದ ಕೈಗಳಿಗೆ ಕೆಲವೊಂದು ಸಿಂಪಲ್ ಮನೆಮದ್ದುಗಳನ್ನು ಇಲ್ಲಿ ಹೇಳಿದ್ದೇವೆ.

ಟ್ಯಾನ್ ಆದ ಕೈಗಳನ್ನು ಸರಿಪಡಿಸಲು ಸರಳ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

ಮೊಸರು ಮತ್ತು ಅರಿಶಿನ ಪ್ಯಾಕ್ :
ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿದ್ದು, ಚರ್ಮವನ್ನು ತಿಳಿಯಾಗಿಸುತ್ತದೆ, ಅರಿಶಿನವು ಚರ್ಮಕ್ಕೆ ಟೋನ್ ಅನ್ನು ನೀಡುವುದು. ಒಂದು ಬಟ್ಟಲು ಮೊಸರು ತೆಗೆದುಕೊಂಡು 1 ಟೀಸ್ಪೂನ್ ಅರಿಶಿನ ಪುಡಿಯನ್ನು ಸೇರಿಸಿ. ಇದನ್ನು ಒಟ್ಟಿಗೆ ಬೆರೆಸಿ ಮತ್ತು ಮಿಶ್ರಣವನ್ನು ನಿಮ್ಮ ಕೈಗೆ ಹಚ್ಚಿ. ಇದನ್ನು ಸುಮಾರು 20 ನಿಮಿಷಗಳ ಕಾಲ ಬಿಡಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ.

ನಿಂಬೆ ರಸ:
ನಿಂಬೆ ರಸದಲ್ಲಿರುವ ವಿಟಮಿನ್ ಸಿ ಚರ್ಮದ ಕೋಶಗಳನ್ನು ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಒಂದು ಕಪ್ ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಹಾಕಿ, ಅದರಲ್ಲಿ ನಿಮ್ಮ ಕೀಯನ್ನು ಸುಮಾರು 15 ನಿಮಿಷಗಳ ಕಾಲ ಇಡಿ. ನಂತರ ನಿಮ್ಮ ಕೈಗಳನ್ನು ತಣ್ಣೀರಿನಿಂದ ತೊಳೆಯಿರಿ. ನಿಂಬೆಯ ಆಮ್ಲೀಯ ಗುಣವು ನಿಮ್ಮ ಚರ್ಮವನ್ನು ಒಣಗುವಂತೆ ಮಾಡುವ ಕಾರಣ ಉತ್ತಮ ಮಾಯಿಸ್ಚರೈಸರ್ ಹಚ್ಚುವುದನ್ನು ಮರೆಯಬೇಡಿ.

ಬಾದಾಮಿ ಪೇಸ್ಟ್:
ಬಾದಾಮಿ ವಿಟಮಿನ್‌ಗಳಲ್ಲಿ ಸಮೃದ್ಧವಾಗಿದ್ದು ಅದು ತ್ವಚೆಯನ್ನು ರಕ್ಷಿಸುತ್ತದೆ. 5 ರಿಂದ 6 ಬಾದಾಮಿ ತೆಗೆದುಕೊಂಡು ರಾತ್ರಿಯಿಡೀ ನೆನೆಸಿಡಿ. ಪೇಸ್ಟ್ ತಯಾರಿಸಲು ಬಾದಾಮಿಯನ್ನು ಸ್ವಲ್ಪ ಹಾಲಿನೊಂದಿಗೆ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಹಚ್ಚಿ, ರಾತ್ರಿಯಿಡೀ ಬಿಡಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ.

ಶ್ರೀಗಂಧ ಮತ್ತು ಅರಿಶಿನ ಪುಡಿ:
2 ಟೀ ಚಮಚ ಶ್ರೀಗಂಧದ ಪುಡಿ ಮತ್ತು ಅರಿಶಿನ ಪುಡಿಯನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ 2 ರಿಂದ 3 ಹನಿ ರೋಸ್ ವಾಟರ್ ಸೇರಿಸಿ, ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕೈಗಳಿಗೆ ಹಚ್ಚಿ, 30 ನಿಮಿಷಗಳ ಕಾಲ ಬಿಡಿ. ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ಈ ಪೇಸ್ಟ್ ಮೈಬಣ್ಣವನ್ನು ಸುಧಾರಿಸುತ್ತದೆ ಮತ್ತು ಹಾನಿಗೊಳಗಾದ ಪ್ರದೇಶಗಳಿಗೆ ಚಿಕಿತ್ಸೆ ನೀಡುತ್ತದೆ.

ಅಲೋವೆರಾ ಜೆಲ್:
ಅಲೋವೆರಾ ಜೆಲ್ ನಲ್ಲಿರುವ ಉತ್ಕರ್ಷಣ ನಿರೋಧಕಗಳು ನಮ್ಮ ಚರ್ಮಕ್ಕೆ ಹಾನಿಯಾಗದಂತೆ ರಕ್ಷಿಸುವುದಲ್ಲೇ, ಟ್ಯಾನಿಂಗ್ ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಸ್ವಲ್ಪ ತಾಜಾ ಅಲೋವೆರಾ ಕ್ಲಿಯರ್ ಜೆಲ್ ತೆಗೆದುಕೊಂಡು ಅದನ್ನು ನಿಮ್ಮ ಕೈಗಳಿಗೆ ಹಚ್ಚಿ. ರಾತ್ರಿಯಿಡೀ ಅದನ್ನು ಬಿಡಿ ಮತ್ತು ಬೆಳಿಗ್ಗೆ ಶುದ್ಧ ನೀರಿನಿಂದ ತೊಳೆಯಿರಿ

ಸೌತೆಕಾಯಿ ಪೇಸ್ಟ್:
ಸೌತೆಕಾಯಿಯಲ್ಲಿ ವಿಟಮಿನ್ ಗಳು ಸಮೃದ್ಧವಾಗಿದ್ದು ಅದು ನಿಮ್ಮ ಚರ್ಮವನ್ನು ರಿಫ್ರೆಶ್ ಮಾಡುತ್ತದೆ ಮತ್ತು ಕಳೆದುಹೋದ ಹೊಳಪನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಒಂದು ಸೌತೆಕಾಯಿ ರಸವನ್ನು ತೆಗೆದುಕೊಂಡು ಅದಕ್ಕೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ಈ ಪೇಸ್ಟ್ ಅನ್ನು ನಿಮ್ಮ ಕೈಗಳಿಗೆ ಹಚ್ಚಿ ಮತ್ತು ಅದನ್ನು ತೊಳೆಯುವ ಮೊದಲು 30 ನಿಮಿಷಗಳ ಕಾಲ ಬಿಡಿ.

Exit mobile version