ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಹರ್ಭಜನ್ ಸಿಂಗ್

ಜಲಂಧರ್‌ ಡಿ 24 : ಭಾರತದ ಖ್ಯಾತ ಸ್ಪಿನ್‌ ಬೌಲರ್‌, ಟರ್ಬನೇಟರ್‌ ಖ್ಯಾತಿಯ ಹರ್ಭಜನ್‌ ಸಿಂಗ್ ಅವರು ಇಂದು ಅಂತಾರಾಷ್ಟ್ರೀಯ  ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

1998ರಲ್ಲಿ ಕೇವಲ 17ನೇ ವಯಸ್ಸಿನಲ್ಲಿ ಕ್ರಿಕೆಟ್ ವೃತ್ತಿಗೆ ಹರ್ಭಜನ್ ಸಿಂಗ್ ಪಾದಾರ್ಪಣೆ ಮಾಡಿದ್ದರು. ಈಗ 23 ವರ್ಷಗಳ ನಂತರ ಅವರು ಕ್ರಿಕೆಟ್‌ಗೆ ಶಾಶ್ವತವಾಗಿ ವಿದಾಯ ಹೇಳಿದ್ದಾರೆ.

ಹರ್ಭಜನ್ ಸಿಂಗ್ 1998ರಲ್ಲಿ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಇದರ ನಂತರ ಅವರು ಅದೇ ವರ್ಷದಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಏಕದಿನ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅವರು 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ T20ಗೆ ಪಾದಾರ್ಪಣೆ ಮಾಡಿದ್ದರು.

1998ರಿಂದ, 2015ರವರೆಗೆ, ಅವರು 103 ಟೆಸ್ಟ್ ಪಂದ್ಯಗಳಲ್ಲಿ 417 ವಿಕೆಟ್ಗಳನ್ನು ಪಡೆದಿದ್ದಾರೆ. ಎರಡು ಶತಕಗಳೊಂದಿಗೆ 2235 ರನ್ಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ 236 ಏಕದಿನ ಪಂದ್ಯಗಳಲ್ಲಿ 269 ವಿಕೆಟ್ಗಳನ್ನು ಮತ್ತು 1237 ರನ್ಗಳನ್ನು ಗಳಿಸಿದರು. ಇನ್ನು ಟಿ20ಯಲ್ಲಿ 28 ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಪಡೆದಿದ್ದಾರೆ. ಅನಿಲ್ ಕುಂಬ್ಳೆ ಮತ್ತು ಆರ್ ಅಶ್ವಿನ್ ನಂತರ ಹರ್ಭಜನ್ ಸಿಂಗ್ ಭಾರತ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ. ಹರ್ಭಜನ್ ಸಿಂಗ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ. ಇದರಲ್ಲಿ ಒಟ್ಟು 150 ವಿಕೆಟ್‌ಗಳನ್ನು ಪಡೆದಿದ್ದಾರೆ.

ವಿಡಿಯೋ ಮುಖೇನ ಧನ್ಯವಾದ ಅರ್ಪಿಸಿದ ಭಜ್ಜಿ :

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶೇಷ ವಿಡಿಯೋ ಹಂಚಿಕೊಂಡಿರುವ ಹರ್ಭಜನ್, ನಾನು ಇಂದು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ನಾನು ನನ್ನ ನಿವೃತ್ತಿಯನ್ನು ಬಹಳ ಹಿಂದೆಯೇ ತೆಗೆದುಕೊಂಡಿದ್ದೆ, ಆದರೆ ಈಗ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ದೀರ್ಘಕಾಲ ಸಕ್ರಿಯ ಕ್ರಿಕೆಟ್ ಆಡಲಿಲ್ಲ. ನಾನು ಇದನ್ನು ಬಹಳ ಹಿಂದೆಯೇ ಮಾಡಲು ಬಯಸಿದ್ದೆ ಆದರೆ ಕೋಲ್ಕತ್ತಾ ನೈಟ್ ರೈಡರ್ಸ್‌ನೊಂದಿಗಿನ ನನ್ನ ಬದ್ಧತೆಯ ಕಾರಣ, ನಾನು ಈ ವರ್ಷ ಅವರೊಂದಿಗೆ ಉಳಿಯಲು ಬಯಸುತ್ತೇನೆ. ಎಲ್ಲರಂತೆ, ನಾನು ಕೂಡ ಭಾರತ ಜರ್ಸಿಯಲ್ಲಿ ತಂಡಕ್ಕೆ ವಿದಾಯ ಹೇಳಲು ಬಯಸಿದ್ದೆ.

ತನ್ನ ಯಶಸ್ಸಿಗೆ ಹರ್ಭಜನ್ ಸಿಂಗ್ ತನ್ನ ಗುರುಗಳಿಗೆ ಧನ್ಯವಾದ ಅರ್ಪಿಸಿದರು. ತಂದೆ-ತಾಯಿಯನ್ನು ಬಿಟ್ಟರೆ ತಂಗಿಯರೆ ನನ್ನ ದೊಡ್ಡ ಶಕ್ತಿ ಎಂದು ಹರ್ಭಜನ್ ಹೇಳಿದ್ದಾರೆ. ಜೊತೆಗೆ ತಮ್ಮ ಇಬ್ಬರು ಮಕ್ಕಳೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯುವುದಾಗಿ ಅವರು ತಮ್ಮ ಪತ್ನಿ ಗೀತಾ ಬಸ್ರಾಗೆ ಭರವಸೆ ನೀಡಿದರು. ಭಾರತದ ಈ ಅನುಭವಿ ತಾರೆ ತಮ್ಮ ವೃತ್ತಿಜೀವನದ ಎಲ್ಲಾ ಸಹ ಆಟಗಾರರು ಮತ್ತು ಎದುರಾಳಿ ಆಟಗಾರರಿಗೆ ಧನ್ಯವಾದ ಅರ್ಪಿಸಿದರು, ಜೊತೆಗೆ ಅಂಪೈರ್ ಗ್ರೌಂಡ್ಸ್ ಮ್ಯಾನ್‌ಗೆ ಧನ್ಯವಾದ ಹೇಳಿದ್ದಾರೆ.

Exit mobile version