ಇದು ನನ್ನ ಕೊನೆಯ ಹೋರಾಟ – ಹೆಚ್.ಡಿ. ಕುಮಾರಸ್ವಾಮಿ

ಮೈಸೂರು ಅ 12 : ಕರ್ನಾಟಕದ ಆಡಳಿತ ಕನ್ನಡಿಗರಿಂದಲೇ ಎಂಬ ಹೊಸ ಅಧ್ಯಾಯ ಪ್ರಾರಂಭ ಮಾಡೋಣ. ಮುಖ್ಯಮಂತ್ರಿ ಮಾಡಿ ಅಂತ ನಾನು ಕೇಳಲ್ಲ. ನಿಮ್ಮ ಬದುಕು ಸರಿಪಡಿಸಲು ಪೂರ್ಣ ಸರ್ಕಾರ ಕೊಡಿ. ಯಾರ ಹಂಗಿನಲ್ಲೂ ಇರದ ಸರ್ಕಾರ ಕೊಡಿ ಇದು ನನ್ನ ಕೊನಯ ಹೋರಾಟ ಹಾಗೂ ಕೊನೆಯ ಚುನಾವಣೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಅದೇ ನನ್ನ ಕೊನೆಯ ಹೋರಾಟ. ಜನರ ಕಷ್ಟ ಬಗೆಹರಿಸಲು ಹೋರಾಟ ಮಾಡುತ್ತೇನೆ. 5 ಯೋಜನೆಗಳ ಮೂಲಕ ಜನರ ಕಷ್ಟ ಬಗೆಹರಿಸುತ್ತೇನೆ. ಸ್ವತಂತ್ರವಾಗಿ ಅಧಿಕಾರ ಮಾಡಲು ಅವಕಾಶ ನೀಡಿ ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಜನವರಿಯಿಂದ‌ ರಾಜ್ಯದ ಎಲ್ಲಾ ಹಳ್ಳಿಗಳಿಗೂ‌ ಹೋಗುತ್ತೇನೆ. ನನ್ನ ಪಂಚರತ್ನ ಯೋಜನೆಗಳ ಬಗ್ಗೆ ಜನರಲ್ಲಿ ಹೇಳುತ್ತೇನೆ. ಮನೆಗೆ ಒಬ್ಬರಿಗೆ ಉದ್ಯೋಗ ನೀಡುವುದು. ಎಲ್ಲರಿಗೂ ಸೂರು ನೀಡುತ್ತೇನೆ. ಉಚಿತವಾಗಿ ಉತ್ತಮ ಶಿಕ್ಷಣ. ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ. ರೈತರು ಸುಸ್ಥಿರವಾಗಿ ಜೀವನ ಕಟ್ಟಿಕೊಳ್ಳುವ ಯೋಜನೆ ತರುತ್ತೇನೆ ಎಂದು ಪಂಚರತ್ನ ಯೋಜನೆ ಬಗ್ಗೆ ಕುಮಾರಸ್ವಾಮಿ ಹೇಳಿದ್ದಾರೆ.

ಜೊತೆಗೆ ಕೊರೊನಾದಿಂದ ರಾಜ್ಯದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಹಾರ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಆದರೆ ರಾಜ್ಯ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ. ರಾಜ್ಯ ಸರ್ಕಾರ ಜಾಹೀರಾತಿನಲ್ಲಿಯೂ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ. ನಿನ್ನೆ ಐದು ಜನ ಸೈನಿಕರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಇದು ಪ್ರಧಾನಿ ಮೋದಿ ಅವರು ನೀಡುತ್ತಿರುವ ಕೊಡುಗೆ ಎಂದು ಕೇಂದ್ರ ಸರ್ಕಾರವನ್ನು ಕೂಡ ಟೀಕಿಸಿದ್ದಾರೆ.

Exit mobile version