New Delhi: 2024 ರ ಲೋಕಸಭಾ ಚುನಾವಣೆಯಲ್ಲಿ (Lok Sabha elections) ರಾಜ್ಯದಲ್ಲಿ ಬಿಜೆಪಿ (BJP) ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಹೆಚ್.ಡಿ.ಕುಮಾರಸ್ವಾಮಿ (H D Kumarswamy) ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದ್ದು, ಉಕ್ಕು ಮತ್ತು ಬೃಹತ್ ಕೈಗಾರಿಕೆ (Steel and bulk industry) ಖಾತೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ತಮಗೆ ಕೃಷಿ ಸಚಿವನಾಗಲು (Agriculture Minister) ಆಸಕ್ತಿಯಿದೆ ಎಂದು ಅಭಿಪ್ರಾಯವನ್ನು ಹೊರಹಾಕಿದ್ದರು. ಕೃಷಿ ಖಾತೆ ಪಡೆದು, ರಾಜ್ಯದಲ್ಲಿ ಕೃಷಿಕರ ಪರ ಹಲವು ಕೆಲಸ ಮಾಡುವುದಾಗಿ ಕೂಡ ಹೇಳಿಕೊಂಡಿದ್ದರು.
![](https://sp-ao.shortpixel.ai/client/to_webp,q_glossy,ret_img,w_1024,h_576/https://vijayatimes.com/wp-content/uploads/2024/06/hd-kumaraswamy-1713177017-1024x576.jpg)
ಆದರೆ, ಶಿವರಾಜ್ ಸಿಂಗ್ ಚೌವ್ಹಾಣ್ (Shivraj Singh Chauhan) ಕೃಷಿ ಮತ್ತು ರೈತರ ಕಲ್ಯಾಣ ಖಾತೆ, ಗ್ರಾಮೀಣಾಭಿವೃದ್ಧಿ ಖಾತೆ ( Rural Development Account) ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಕಾರಣ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಕುಮಾರಸ್ವಾಮಿಗೆ ನೀಡಲಾಗಿದೆ.ಆದರೆ ಇದರಿಂದ ಬೇಸರಗೊಳ್ಳದ ಕುಮಾರಸ್ವಾಮಿ ದೇಶಾದ್ಯಂತ ಉತ್ಪಾದನಾ ವಲಯವನ್ನು ಬಲಪಡಿಸುವ ದೂರದೃಷ್ಟಿ ನನಗಿದೆ ಹಾಗಾಗಿಯೇ ಈ ಖಾತೆ ದೊರೆತಿದೆ ಎಂದು ಹೇಳಿಕೆ ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವರಾಗಿ ಕುಮಾರಸ್ವಾಮಿಯವರು ಇಂದು ಸಂಜೆ 5 ಗಂಟೆಗೆ ಅಧಿಕಾರ ಸ್ವೀಕರಿಸಲಿದ್ದಾರೆ.ಉತ್ಪಾದನಾ ಕ್ಷೇತ್ರದಲ್ಲಿ ಬಹಳಷ್ಟು ನಿರೀಕ್ಷೆಗಳಿವೆ. ಇಲಾಖೆಯಲ್ಲೂ ಹೊಸ ಬದಲಾವಣೆ ತರಲು ಪ್ರಯತ್ನ ಮಾಡುತ್ತೇನೆ. ಇದಕ್ಕಾಗಿ ದೇಶದಾದ್ಯಂತ ಸುತ್ತಾಡಲು ನಿರ್ಧರಿಸಿದ್ದೇನೆ. ಉದ್ಯಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ನಮ್ಮ ಕರ್ನಾಟಕದ (Karnataka) ಎಲ್ಲಾ ಜಿಲ್ಲೆಗಳಲ್ಲಿ ವಿಶೇಷವಾಗಿ ಕಲ್ಯಾಣ-ಕರ್ನಾಟಕದಂತಹ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉಪಕ್ರಮಗಳನ್ನು ತೆಗೆದುಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಕೃಷಿ ಖಾತೆಯ ನಿರೀಕ್ಷೆಯಲ್ಲಿದ್ದರೂ, ಕೈಗಾರಿಕೆ ಮತ್ತು ಉಕ್ಕು ಖಾತೆಯನ್ನು ನೀಡುವ ನಿರ್ಧಾರವನ್ನು ಗೌರವಿಸುತ್ತೇನೆ ಮತ್ತು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ ಎಂದು ತಿಳಿಸಿದ್ದಾರೆ.