ಮುಸ್ಲಿಂ ಅಭ್ಯರ್ಥಿಗಳ ವಿವಾದ ಶುರು ಮಾಡಿದ್ದೇ ಸಿದ್ದರಾಮಯ್ಯ – ಹೆಚ್‌ ಡಿ ಕುಮಾರಸ್ವಾಮಿ

ಬೆಂಗಳೂರು ಅ 19 : ಸಿದ್ದರಾಮಯ್ಯ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಲು ನನಗೇನು ಬೇರೆ ಕೆಲಸ ಇಲ್ಲವೇ? ಮುಸ್ಲಿಂ ಅಭ್ಯರ್ಥಿಗಳ ರಾಜಕೀಯ ವಿವಾದ ಶುರು ಮಾಡಿದ್ದು ಯಾರು? ಅವರೇ ಅಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಹಾನಗಲ್‌ ಮತ್ತು ಸಿಂಧಗಿಯಲ್ಲಿ ಜೆಡಿಎಸ್‌ ಪಕ್ಷ ಇಬ್ಬರು ಸುಶಿಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ. ಆದರೆ, ಜೆಡಿಎಸ್‌ ಸೆಕ್ಯುಲರ್‌ ಮತಗಳನ್ನು ವಿಭಜಿಸಿ ಬಿಜೆಪಿಗೆ ಗೆಲ್ಲಲು ಅವಕಾಶ ಮಾಡಿಕೊಡಲು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ ಎಂದು ಸಿದ್ದರಾಮಯ್ಯ ಮೊದಲು ಹುಯಿಲೆಬ್ಬಿಸಿದರು. ಅನಗತ್ಯ ವಿವಾದವನ್ನು ಸೃಷ್ಟಿಸಿ  ಗೊಂದಲ ಆರಂಭ ಮಾಡಿದ್ದಾರೆ. ಬಹುಶಃ ಅದಕ್ಕೆ ನಾನೇ ಅಂತ್ಯ ಹಾಡಬೇಕಾಗುತ್ತದೆ, ಅಂಥ ಸ್ಥಿತಿಗೆ ನನ್ನನ್ನು ದೂಡಿದ್ದಾರೆ ಎಂದು ಹೆಚ್‌ಡಿಕೆ  ಮಾರ್ಮಿಕವಾಗಿ ನುಡಿದಿದ್ದಾರೆ.

ಕಾಂಗ್ರೆಸ್‌ ಪಕ್ಷವೇ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಬಹುದಾಗಿತ್ತಲ್ಲವೇ? ಅದನ್ನು ಮಾಡದೇ ಜೆಡಿಎಸ್‌ ಟಿಕೆಟ್‌ ಕೊಟ್ಟಿತು ಎಂಧು ಕೊರಗುವುದು ಏಕೆ? ಸಿಂಧಗಿಯಲ್ಲಿ ನಮ್ಮ ಪಕ್ಷದ ನಿಷ್ಠಾವಂತರಿಗೆ ಟಿಕೆಟ್‌ ಕೊಟ್ಟಿದ್ದೇವೆ. ಪಕ್ಷದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಮರಣ ಹೊಂದಿದ ನಾಯಕರ ಕುಟುಂಬದ ಹೆಣ್ಣು ಮಗಳು ನಾಜಿಯಾ ಶಕೀಲಾ ಅಂಗಡಿ ಅವರಿಗೆ ಟಿಕೆಟ್‌ ನೀಡಿದ್ದೇವೆ. ಇದರ ಬಗ್ಗೆ ಕಾಂಗ್ರೆಸ್‌ಗೆ ಸಂಕಟವೇಕೆ? ಕ್ಷೇತ್ರದಲ್ಲಿ ಪೈಪೋಟಿ ಇರುವುದು ಜೆಡಿಎಸ್-ಬಿಜೆಪಿ ನಡುವೆ ಮಾತ್ರ. ಯಾವ ಚುನಾವಣೆಯ್ಲಲೂ ಕಾಂಗ್ರೆಸ್‌ ಸಿಂಧಗಿಯಲ್ಲಿ ಎರಡನೇ ಸ್ಥಾನಕ್ಕೂ ಬಂದಿಲ್ಲ. ಹಾಗಿದ್ದ ಮೇಲೆ ಜೆಡಿಎಸ್‌ ವಿರುದ್ಧ ಅಪಪ್ರಚಾರ ಮಾಡುವುದೇಕೆ? ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

Exit mobile version