ಬಡ ಕುಟುಂಬಗಳ ಯುವಕರನ್ನು ರಾಜಕೀಯ ದುರ್ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ : ಹೆಚ್.ಡಿ. ಕುಮಾರಸ್ವಾಮಿ

bjp

ರಾಜ್ಯ ಬಿಜೆಪಿ(State BJP) ಸರಕಾರದ ಪಕ್ಷಪಾತ ನೀತಿ ಕಣ್ಣಿಗೆ ರಾಚುವಂತಿದೆ. ಇದು ಅತ್ಯಂತ ಮಾರಕ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ನಡವಳಿಕೆಯನ್ನು ಯಾರೂ ಒಪ್ಪುವುದಿಲ್ಲ. ಈಗೇನೋ ಜ್ಞಾನೋದಯವಾಗಿ ಮಸೂದ್ ಮತ್ತು ಫಾಝಿಲ್ ಮನೆಗೂ ಭೇಟಿ ನೀಡುವುದಾಗಿ ಹೇಳಿದ್ದಾರೆ. ಕಂಗೊಳಿಸುತ್ತಿದ್ದ ಕರಾವಳಿಯಲ್ಲಿ ಬಡ ಕುಟುಂಬಗಳ ಯುವಕರನ್ನು ರಾಜಕೀಯ ದುರ್ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳೂ ಕ್ರಿಯಾಶೀಲ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದೆ ಎಂದು ಜೆಡಿಎಸ್‌ ನಾಯಕ(JDS Leader) ಕುಮಾರಸ್ವಾಮಿ(HD Kumarswamy) ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಅವರು, ಮಂಗಳೂರಿನಲ್ಲಿ ನಿನ್ನೆ ಹೇಳಿದಂತೆ, ಅಗಸ್ಟ್ 5 ರೊಳಗೆ ನೈಜ ಕೊಲೆಗಡುಕರನ್ನು ಬಂಧಿಸದಿದ್ದರೆ ನಾನು ಶಾಂತಿಯುತ ಸತ್ಯಾಗ್ರಹ ಕೂರುವುದು ಶತಃಸಿದ್ಧ. ನನ್ನದು ಗಾಂಧೀ ಮಾರ್ಗ. ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿಯುವ ಪಕ್ಷಕ್ಕೆ ನೆತ್ತರ ದಾರಿಯೇ ರಾಜಮಾರ್ಗ ಎನ್ನುವುದು ಕರಾವಳಿ ಜನರು ಅರ್ಥ ಮಾಡಿಕೊಂಡಿದ್ದಾರೆ. ಕರಾವಳಿಯಲ್ಲಿ ನಡೆದ ತ್ರಿವಳಿ ಕೊಲೆಗಳ ಗುಟ್ಟನ್ನು ಬೇಧಿಸಿ ನೈಜ ಹಂತಕರನ್ನು ಹಿಡಿಯುವ ಬದಲು ರಾಜ್ಯ ಬಿಜೆಪಿ ಸರಕಾರವು, ತಾನೇ ಮುಂದೆ ನಿಂತು ದಿನಕ್ಕೊಂದು ಕಥೆ ಕಟ್ಟುತ್ತಿದೆ.

ಕ್ಷಣಕ್ಕೊಂದು ಟ್ವಿಸ್ಟ್ ಕೊಡುತ್ತಾ, ಜನರಿಗೆ ಸತ್ಯ ತಿಳಿಸುತ್ತಿಲ್ಲ ಎಂದು ಟೀಕಿಸಿದ್ದಾರೆ. ಇನ್ನು ಇದಕ್ಕೂ ಮುನ್ನ ಮಂಗಳೂರಿನ ಸುರತ್ಕಲ್ನ ಮಂಗಳಾಪೇಟೆಯಲ್ಲಿ ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಯುವಕ ಫಾಜಿಲ್ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿ, ಪುತ್ರ ಶೋಕದಿಂದ ತಲ್ಲಣಿಸಿರುವ ಆ ಕುಟುಂಬದವರಿಗೆ ಜೆಡಿಎಸ್‌ ಪಕ್ಷದ ವತಿಯಿಂದ 5 ಲಕ್ಷ ರೂ. ನೆರವಿನ ಚೆಕ್ ಹಸ್ತಾಂತರ ಮಾಡಿದರು. ತೀವ್ರ ಶೋಕದಲ್ಲಿರುವ ಕುಟುಂಬದವರು ಈ ನೋವಿನಿಂದ ಹೊರಬರಬೇಕು. ಪಕ್ಷದ ವತಿಯಿಂದ ಆ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದರು.

Exit mobile version