ಜೈ ಭೀಮ್ ಮತ್ತು ಜನ ಗಣ ಮನ ಸಿನಿಮಾಗಳೆರಡೂ ನನ್ನ ಮನ ಕಲಕಿವೆ : ಹೆಚ್.ಡಿಕೆ

HDK

ಕೋವಿಡ್(Covid 19) ಸೋಂಕಿನಿಂದ ಒಂದು ವಾರ ಮನೆಯಲ್ಲೇ ಚಿಕಿತ್ಸೆ ಪಡೆದ ನಾನು, ಓದು ಹಾಗೂ ಸಿನಿಮಾ ವೀಕ್ಷಣೆಯಲ್ಲಿಯೇ ಸಮಯ ಕಳೆದೆ. ಈ ಬಿಡುವಿನಲ್ಲಿ ಎರಡು ಸಿನಿಮಾಗಳನ್ನು ವೀಕ್ಷಿಸಿದೆ. `ಜೈ ಭೀಮ್ʼ(Jai Bhim) ಮತ್ತು ಜನ ಗಣ ಮನ. ಸೂಕ್ಷ್ಮ ಕಥಾಹಂದರದ ಈ ಸಿನಿಮಾಗಳೆರಡೂ ನನ್ನ ಮನ ಕಲಕಿವೆ ಮತ್ತು ತೀವ್ರ ತಳಮಳಕ್ಕೆ ಕಾರಣವೂ ಆಗಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ(HD Kumarswamy) ಹೇಳಿಕೊಂಡಿದ್ದಾರೆ.


ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಅವರು, `ಜನ ಗಣ ಮನʼ ಚಿತ್ರ ಇವತ್ತಿನ ರಾಜಕೀಯ ಕಪಟತೆ, ಕುಟಿಲತೆ, ಲಂಪಟತೆಯನ್ನು ಮನೋಜ್ಞವಾಗಿ ತೆರೆದಿಟ್ಟಿದೆ. ರಾಜಕೀಯದ ಕಪಿಮುಷ್ಠಿಗೆ ಸಿಲುಕಿ ನರಳುವ ವ್ಯವಸ್ಥೆಯ ಅಸಹಾಯಕ ಮುಖದ ದರ್ಶನ ಮಾಡಿಸಿದೆ. ವ್ಯವಸ್ಥೆಗೆ ಕನ್ನಡಿಯಂತಿರುವ ಸಿನಿಮಾಗಳು ಆವೇಶಕ್ಕೆ, ಆಲೋಚನೆಗೆ ದೂಡುತ್ತವೆ. ಎರಡೂ ಚಿತ್ರಗಳ ನಿರ್ದೇಶಕರು ಅಭಿನಂದನಾರ್ಹರು. ಇನ್ನು ಸಂವಿಧಾನ(Constitution) ನಮಗೆ ಶ್ರೇಷ್ಠ ನ್ಯಾಯಾಂಗವನ್ನು ಕೊಟ್ಟಿದೆ. ಕಷ್ಟ ಎದುರಾದಾಗ ಬಿಲಿನಿಯರ್ʼನಿಂದ ಕಟ್ಟಕಡೆಯ ಬಡಪ್ರಜೆವರೆಗೂ ಎಲ್ಲರೂ ಕೋರ್ಟ್ ಕಡೆ ನೋಡುತ್ತಾರೆ.

ಎಲ್ಲರೂ ಇಲ್ಲಿ ಸಮಾನರು. ಅದು ಹಕ್ಕು ಹೌದು. ತಮಿಳುನಾಡಿನ ಕಡಲೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿದ ‘ಜೈ ಭೀಮ್’ ಚಿತ್ರ ಮನುಷ್ಯತ್ವಕ್ಕೇ ಸವಾಲೆಸೆಯುವ ಅನೇಕ ಪ್ರಶ್ನೆಗಳನ್ನು ಎತ್ತಿದೆ ಎಂದಿದ್ದಾರೆ. ಆತುರಗೆಟ್ಟ ಆರೋಪ ಪಟ್ಟಿ, ವಿವೇಚನೆ ಇಲ್ಲದ ಬಂಧನ, ಜಾಮೀನು ಪಡೆಯಲು ಹೆಣಗಾಟದ ಕರಾಳತೆಯ ಮೇಲೆ `ಜೈ ಭೀಮ್ʼ ಬೆಳಕು ಚೆಲ್ಲಿದೆ. ಮಾನ್ಯ ಮುಖ್ಯ ನ್ಯಾಯಮೂರ್ತಿಗಳು ಇದನ್ನೇ ಹೇಳಿ ಕಳವಳ ವ್ಯಕ್ತಪಡಪಡಿಸಿದ್ದಾರೆ. ಅವರ ದನಿ ದೇಶಕ್ಕೇ ಕೇಳಿಸಿದೆ. ಹಾಗಾದರೆ, ನಾವು ಬದಲಾಗುವುದು ಯಾವಾಗ?

ಸುಧಾರಣೆಗಳು ಎಂದು? ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಹಾಗಾದರೆ, 5 ವರ್ಷಗಳ ಅವರ ಸೆರೆವಾಸಕ್ಕೆ ಉತ್ತರದಾಯಿಗಳು ಯಾರು? ಅವರ ಕುಟುಂಬ ಸದಸ್ಯರು ಅನುಭವಿಸಿದ ಕಷ್ಟಕ್ಕೆ ಪರಿಹಾರವೇನು? 2017ರಲ್ಲಿ ಛತ್ತೀಸಗಢದಲ್ಲಿ CRPF ಜವಾನರ ಮೇಲೆ ನಡೆದ ದಾಳಿ ಪ್ರಕರಣದಲ್ಲಿ 121 ಬುಡಕಟ್ಟು ಜನರನ್ನು ಬಂಧಿಸಲಾಗಿತ್ತು. 5 ವರ್ಷ ಅವರು ಜೈಲುಗಳಲ್ಲಿ ನರಕ ಅನುಭವಿಸಿದರು. ಕೊನೆಗೆ ಅವರ ಪಾತ್ರದ ಬಗ್ಗೆ ಸಾಕ್ಷ್ಯ ಇಲ್ಲ ಎಂದು ಎನ್ಐಎ ಕೋರ್ಟ್ ತೀರ್ಪು ನೀಡಿ, ಆ ಮುಗ್ಧರನ್ನು ಖುಲಾಸೆಗೊಳಿಸಿದೆ. ಇದು ಸಮಾಧಾನದ ಸಂಗತಿ ಎಂದಿದ್ದಾರೆ.


ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದು ಇದನ್ನೇ. ವಿಚಾರಣೆಯೇ ಇಲ್ಲದೆ ಖೈದಿಗಳ ದೀರ್ಘಾವಧಿ ಸೆರೆ ಪ್ರಶ್ನಾರ್ಹ. ನಮ್ಮ ದೇಶದಲ್ಲಿ ಸೆರೆವಾಸದಲ್ಲಿರುವ 6.10 ಲಕ್ಷ ಖೈದಿಗಳಲ್ಲಿ ಶೇ.80 ರಷ್ಟು ಜನ ವಿಚಾರಣಾಧೀನ ಖೈದಿಗಳೇ! ಇವರೆಲ್ಲರೂ ವಿಚಾರಣೆ ಪೂರ್ಣಗೊಳ್ಳದೇ ಕಂಬಿಗಳ ಹಿಂದೆ ಜೀವಂತ ಶವಗಳಂತೆ ಬದುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತೀಯ ನ್ಯಾಯ ವ್ಯವಸ್ಥೆ ಬಡವರು ದಲಿತರು, ಅಶಕ್ತರಿಗೆ ಗಗನ ಕುಸುಮವಾ? ಓರ್ವ ಸಿರಿವಂತ ಅಪರಾಧಿಗೆ ಕೆಲ ಗಂಟೆಗಳಲ್ಲೇ ಜಾಮೀನು ಸಿಕ್ಕಿದರೆ, ಅದೇ ಬಡ ಅಪರಾಧಿಗಳ (ಅನೇಕ ಪ್ರಕರಣಗಳಲ್ಲಿ ಮುಗ್ಧರು) ಅರ್ಜಿಗಳಿಗೆ ಮೋಕ್ಷವೇ ಕಾಣುವುದಿಲ್ಲ.

ಸರಳುಗಳ ಹಿಂದಿನ ನರಕವನ್ನು `ಜೈ ಭೀಮ್ʼ ನೈಜವಾಗಿ ತೋರಿಸಿದೆ. ಸುಪ್ರೀಂ ಕೋರ್ಟ್’ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ರಮಣ ಅವರು ವಿಚಾರಣಾಧೀನ ಖೈದಿಗಳ ದುಸ್ಥಿತಿಯ ಬಗ್ಗೆ ಜೈಪುರದಲ್ಲಿ ನೀಡಿದ್ದ ಹೇಳಿಕೆ ಹಾಗೂ ಜೈ ಭೀಮ್ ಚಿತ್ರದಲ್ಲಿ ಅದೇ ಖೈದಿಗಳ ಸುತ್ತ ಬಿಚ್ಚಿಕೊಳ್ಳುವ ಕಠೋರ ಕಹಿಸತ್ಯಗಳ ಬಗ್ಗೆ ಇಡೀ ಭಾರತವೇ ಆಲೋಚಿಸಬೇಕು. ನಾನು ಆಲೋಚಿಸುತ್ತಿದ್ದೇನೆ. ಬದಲಾವಣೆಗೆ ಖಂಡಿತಾ ಪ್ರಯತ್ನಿಸುವೆ ಎಂದು ತಿಳಿಸಿದ್ದಾರೆ.

Exit mobile version