ಬೇಸಿಗೆಯ ಬೇಗೆ ನೀಗಿಸಲು ಪ್ರಕೃತಿಯ ವರದಾನ ಈ ಚೀನಿಕಾಯಿ!

pumpkin

ಚೀನಿಕಾಯಿ(Pumpkin) ಅಂದ್ರೆ ಮೂಗು ಮುರಿಯೋರೆ ಹೆಚ್ಚು. ಪೌಷ್ಟಿಕಾಂಶ ಹೇರಳವಾಗಿರೋ ತರಕಾರಿಯಾದರೂ, ಹೆಚ್ಚಿನವರಿಗೆ ಅದು ಇಷ್ಟವಾಗುವುದಿಲ್ಲ. ಆದರೆ, ಬೇಸಿಗೆಯಲ್ಲಿ ಈ ಚೀನಿಕಾಯಿ ಸೇವಿಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ.

ಇದರಲ್ಲಿ ಫೈಬರ್, ನೀರು, ವಿಟಮಿನ್-ಎ, ವಿಟಮಿನ್-ಬಿ, ಕಬ್ಬಿಣ, ಮೆಗ್ನೀಸಿಯಮ್, ಆಂಟಿಆಕ್ಸಿಡೆಂಟ್ ಮುಂತಾದ ಅನೇಕ ಗುಣಗಳಿದ್ದು, ನಾನಾ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾದರೆ ಚೀನಿಕಾಯಿಯ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ. ಬೇಸಿಗೆಯಲ್ಲಿ ದೇಹಕ್ಕೆ ಬಹಳ ಮುಖ್ಯವಾಗಿ ಬೇಕಾಗಿರೋದು ನೀರು. ಚೀನಿಕಾಯಿ ಸೇವನೆಯಿಂದ ನಿಮ್ಮ ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸಿಕೊಳ್ಳಬಹುದು. ಬೇಸಿಗೆ ಕಾಲದಲ್ಲಿ ದೇಹವನ್ನು ಎಷ್ಟು ಹೈಡ್ರೇಟ್ ಆಗಿಟ್ಟುಕೊಂಡರೂ ಸಾಲದು, ಬಿಸಿಲಿನ ತಾಪಕ್ಕೆ ನಿರ್ಜಲೀಕರಣ ಉಂಟಾಗುವುದು ಸಾಮಾನ್ಯ.

ಆದ್ದರಿಂದ ನಿಮ್ಮ ಆಹಾರದಲ್ಲಿ ಈ ಚೀನಿಕಾಯಿಯನ್ನು ಸೇರಿಸಲು ಪ್ರಯತ್ನಿಸಿ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿಡುವುದಲ್ಲದೇ, ಯಾವಾಗಲೂ ಉಲ್ಲಾಸದಾಯಕವಾಗಿರಲು ಸಹಾಯ ಮಾಡುವುದು.
ಕೋವಿಡ್ ನಂತಹ ರೋಗಗಳು ತಾಂಡವವಾಡ್ತಿರೋ ಈಗಿನ ಕಾಲದಲ್ಲಿ ರೋಗ ನಿರೋಧಕ ಶಕ್ತಿಯ ಅವಶ್ಯಕತೆ ಎಷ್ಟಿದೆ ಎಂಬುದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಅದೇ ರೀತಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಚೀನಿಕಾಯಿಯನ್ನು ನಿಮ್ಮ ಆಹಾರದ ಭಾಗವಾಗಿಸಿ. ಇದರಲ್ಲಿ ವಿಟಮಿನ್-ಸಿ, ಕಬ್ಬಿಣ, ಮೆಗ್ನೀಸಿಯಮ್, ಥಯಾಮಿನ್, ರೈಬೋಫ್ಲಾವಿನ್ ಮತ್ತು ಸತ್ವ ಇರುವುದರಿಂದ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಬಹಳ ಸಹಕಾರಿಯಾಗಿದೆ.


ಆರೋಗ್ಯಕರ ಚರ್ಮದ ರಹಸ್ಯವು ಹೊಟ್ಟೆಯಲ್ಲಿ ಅಡಗಿದೆ ಎಂಬುದು ಸುಳ್ಳಲ್ಲ. ನಾವು ಏನು ಸೇವಿಸುತ್ತೀವೋ, ಅದು ಮುಖದಲ್ಲಿ ಗೋಚರವಾಗುತ್ತೆ. ಹೊಟ್ಟೆಯಲ್ಲಿ ಸ್ವಲ್ಪ ತೊಂದರೆ ಉಂಟಾದ್ರು ನಿಮ್ಮ ಮುಖದ ಮೇಲೆ ದದ್ದು, ಮೊಡವೆ, ನಿರ್ಜೀವ ಚರ್ಮದಂತಹ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಚೀನಿಕಾಯಿ ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ವಾರದಲ್ಲಿ ಎರಡರಿಂದ ಮೂರು ಬಾರಿ ಇದನ್ನು ಸೇವಿಸುವುದರಿಂದ ಹೊಟ್ಟೆ ಸ್ವಚ್ಛವಾಗಿರುತ್ತದೆ. ಚೀನಿಕಾಯಿ ಮಧುಮೇಹ ಇರುವವರಿಗೆ ಬಹಳ ಒಳ್ಳೆಯದು. ಇದರ ಸೇವನೆಯಿಂದ ದೇಹದ ಇನ್ಸುಲಿನ್ ಅನ್ನು ನಿಯಂತ್ರಿಸಬಹುದು.

ಈ ಮೂಲಕ ನಿಮ್ಮ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಡಯಾಬಿಟಿಸ್ ಸಮಸ್ಯೆ ಇರುವವರು ಈ ಚೀನಿಕಾಯಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮವಾದ ಆಯ್ಕೆಯಾಗಿದೆ. ಹಾಗಾದ್ರೆ ಈ ಬೇಸಿಗೆಯಲ್ಲಿ ಚೀನಿಕಾಯಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.

Exit mobile version