ಜಿಮ್‌ನಲ್ಲಿ ಹೃದಯಾಘಾತ ಸಾವಿನ ದವಡೆಯಿಂದ ಪಾರಾದ ಉದ್ಯಮಿ

ಬೆಂಗಳೂರು ಡಿ 4 : ಜಿಮ್‌ ಮಾಡುವಾಗ ಉದ್ಯಮಿಯೊಬ್ಬರಿಗೆ  ಹೃದಯಾಘಾತವಾಗಿದ್ದು ಜಿಮ್ ಟ್ರೇನರ್‌ ಅವರ ಸಮಯ ಪ್ರಜ್ಞೆಯಿಂದಾಗಿ ಉದ್ಯಮಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.  ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದ ಉದ್ಯಮಿ ಗುರುದತ್‌ (49) ಎಂಬುವವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣವೇ ಚಿಕಿತ್ಸೆ ಸಿಕ್ಕಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ನಡೆದ ಈ ಹೃದಯಾಘಾತ ಘಟನೆ ನಟ ಪುನೀತ್‌ ರಾಜ್‌ಕುಮಾರ್‌ ಅವರ ಕೊನೆಕ್ಷಣವನ್ನು ನೆನಪಿಸಿದ್ದು, ಹೃದಯಾಘಾತ ಉಂಟಾದ ಕೂಡಲೇ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಅತ್ಯವಶ್ಯಕ ಎನ್ನುವುದನ್ನು ಒತ್ತಿ ಹೇಳಿದೆ. ಕುಮಾರಸ್ವಾಮಿ ಲೇಔಟ್‌ ನಿವಾಸಿ ಗುರುದತ್‌ ಜಿಮ್‌ನಲ್ಲಿ ವರ್ಕ್ಔಟ್‌ ಮಾಡುತ್ತಿದ್ದ ವೇಳೆ ಹೃದಯ ಸ್ತಂಭನದಿಂದ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಜಿಮ್‌ ತರಬೇತುದಾರ ಕೂಡಲೇ ಹತ್ತಿರದ ಸಾಗರ್‌ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ.

ಶಿಸ್ತಿನ ಜೀವನ ರೂಪಿಸಿಕೊಂಡಿರುವ ಗುರುದತ್‌, ಕಳೆದ ಮೂರು ವರ್ಷಗಳಿಂದ ಪ್ರತಿದಿನ ಸತತ ಎರಡು ತಾಸು ಜಿಮ್‌ ಮಾಡುತ್ತಿದ್ದರು. ಇದುವರೆಗೆ ಅವರಿಗೆ ಹೃದಯ ಸಂಬಂಧಿ ಯಾವುದೇ ಸಮಸ್ಯೆ ಇರಲಿಲ್ಲ. ಸಣ್ಣ ನೋವು ಕೂಡ ಕಾಣಿಸಿಕೊಂಡಿರಲಿಲ್ಲ. ಯಾವುದೇ ದುಶ್ಚಟಗಳಿಲ್ಲದ, ಶಿಸ್ತುಬದ್ಧ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದ ಅವರು, ನೆಗಡಿ, ಕೆಮ್ಮು ಹೊರತುಪಡಿಸಿ ಬೇರೆ ಯಾವುದಕ್ಕೂ ಮಾತ್ರೆ ನುಂಗಿದ ಉದಾಹರಣೆಯೂ ಇಲ್ಲ. ಇಂಥ ವ್ಯಕ್ತಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿರುವುದು ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರಿಗೆ ಶಾಕ್‌ ನೀಡಿದೆ. ಆರೋಗ್ಯವಾಗಿದ್ದ ವ್ಯಕ್ತಿಗೆ ದಿಢೀರನೆ ಕಾಣಿಸಿಕೊಂಡ ಈ ಸಮಸ್ಯೆಯಿಂದ ಕುಟುಂಬ ಆತಂಕಗೊಂಡಿದೆ.

Exit mobile version