ಸೊಳ್ಳೆ ಕಚ್ಚಿ ಆಗಿರುವ ಗುಳ್ಳೆಯನ್ನು ಹೋಗಲಾಡಿಸುವ ಮನೆಮದ್ದುಗಳು ಇಲ್ಲಿವೆ

ಮಳೆಗಾಲ ಶುರುವಾಗುತ್ತಿದೆ. ಮಳೆಯಿಂದ ಅಲ್ಲಲ್ಲಿ ನೀರು ನಿಂತು ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದು ಹೆಚ್ಚು. ಇದರಿಂದ ಸಂಜೆ ವೇಳೆ ಸೊಳ್ಳೆಗಳು ಕಿವಿಯ ಹತ್ತಿರ ಬಂದು ಸಂಗೀತ ಹಾಡುತ್ತವೆ. ಸೊಳ್ಳೆ ಕಚ್ಚುವಿಕೆಯು ತುರಿಕೆಗೆ ಕಾರಣವಾಗುವುದಲ್ಲದೆ ದೇಹದ ಮೇಲೆ ಕೆಂಪು ಗುರುತುಗಳನ್ನೂ ಉಂಟುಮಾಡುತ್ತದೆ. ಈ ಗುರುತುಗಳು ಹೋಗಲು ವಾರಗಟ್ಟಲೇ ಸಮಯ ಬೇಕಾಗುವುದು. ಈ ಸಂದರ್ಭದಲ್ಲಿ, ಸೊಳ್ಳೆ ಕಡಿತದಿಂದ ದೇಹದ ಮೇಲೆ ಉಂಟಾಗುವ ಕೆಂಪು ಗುಳ್ಳೆಗಳನ್ನು ತೆಗೆದುಹಾಕಲು ಮನೆಮದ್ದುಗಳನ್ನು ಈ ಲೇಖನದಲ್ಲಿ ಹೇಳಿದ್ದೇವೆ.

ಸೊಳ್ಳೆ ಕಡಿತದಿಂದ ಉಂಟಾಗುವ ಕೆಂಪು ಗುಳ್ಳೆಗಳನ್ನು ತೆಗೆದುಹಾಕಲು ಸರಳ ಪರಿಹಾರಗಳನ್ನು ಈ ಕೆಳಗೆ ನೀಡಲಾಗಿದೆ:

ಆಪಲ್ ಸೈಡರ್ ವಿನೆಗರ್ :
ಆಪಲ್ ವಿನೆಗರ್ ಅನ್ನು ಚರ್ಮ ಮತ್ತು ಕೂದಲ ಆರೈಕೆಗೆ ಬಳಸಲಾಗುತ್ತದೆ. ಅಲ್ಲದೆ, ತೂಕ ನಷ್ಟಕ್ಕೆ ಆಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಕುಡಿಯಲಾಗುತ್ತದೆ. ಹಾಗೆಯೇ ಇದನ್ನು ಸೊಳ್ಳೆ ಕಡಿತದಿಂದ ಉಂಟಾದ ಕೆಂಪು ಗುಳ್ಳೆ ಕಡಿಮೆ ಮಾಡಲು ಸಹ ಬಳಸಲಾಗುತ್ತದೆ. ನಿಮ್ಮ ಮುಖದ ಮೇಲೆ ಸೊಳ್ಳೆ ಕಚ್ಚಿದರೆ, ನೀವು ಮೂರು ಟೀ ಚಮಚ ನೀರನ್ನು ಅರ್ಧ ಟೀ ಚಮಚ ಆಪಲ್ ಸೈಡರ್ ವಿನೆಗರ್ ನೊಂದಿಗೆ ಬೆರೆಸಿ, ಗುಳ್ಳೆ ಇರುವ ಜಾಗಕ್ಕೆ ಹಚ್ಚಿದರೆ ಕೆಂಪು ಗುಳ್ಳೆಯ ಚರ್ಮವು ಕಣ್ಮರೆಯಾಗುತ್ತದೆ.

ನಿಂಬೆಯ ಸಿಪ್ಪೆ:
ನಿಂಬೆಯ ಸಿಪ್ಪೆಯಲ್ಲಿ ಉತ್ತಮ ಗುಣಗಳಿದ್ದು, ನಿಮ್ಮ ಚರ್ಮದ ಮೇಲಿನ ಕಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೊಳ್ಳೆ ಕಡಿತದಿಂದ ದದ್ದುಗಳು ರೂಪುಗೊಂಡಿದ್ದರೆ, ಆ ಪ್ರದೇಶಕ್ಕೆ ನಿಂಬೆ ಸಿಪ್ಪೆಯನ್ನು ಹಚ್ಚಿ. ಇದು ನಿಮ್ಮ ದದ್ದು ಗುರುತುಗಳನ್ನು ಕಣ್ಮರೆಯಾಗುವಂತೆ ಮಾಡುತ್ತದೆ. ಜೊತೆಗೆ ತುರಿಕೆ ಕೂಡ ಇರುವುದಿಲ್ಲ.

ಈರುಳ್ಳಿ ತುಂಡು:
ಸೊಳ್ಳೆ ಕಡಿತದಿಂದ ಸಾಮಾನ್ಯವಾಗಿ ದದ್ದುಗಳು ಉಂಟಾಗುತ್ತವೆ. ಇದನ್ನು ದೂರಮಾಡಲು ಈರುಳ್ಳಿಯು ಸಹಾಯ ಮಾಡುತ್ತದೆ. ಈರುಳ್ಳಿಯು ದದ್ದುಗಳನ್ನು ತೆಗೆದುಹಾಕುವುದಲ್ಲದೇ, ತುರಿಕೆಯನ್ನು ಸಹ ಕಡಿಮೆ ಮಾಡುತ್ತದೆ. ಒಂದು ಈರುಳ್ಳಿಯನ್ನು ತೆಗೆದುಕೊಂಡು, ಸಣ್ಣಗೆ ಹೆಚ್ಚಿ ಅದನ್ನು ದದ್ದು ಅಥವಾ ಕೆಂಪು ಗುಳ್ಳೆಯಿರುವ ಜಾಗಕ್ಕೆ ಹಚ್ಚಿ. ಇದರಿಂದ ದದ್ದುಗಳು ಕಡಿಮೆಯಾಗುತ್ತದೆ.

ಅಡಿಗೆ ಸೋಡಾ:
ಇದು ಕೂಡ ಸೊಳ್ಳೆ ಕಡಿತದಿಂದ ಉಂಟಾದ ಕೆಂಪು ಗುಳ್ಳೆಯನ್ನು ಹೋಗಲಾಡಿಸಲು ಉತ್ತಮ ಪರಿಹಾರವಾಗಿದೆ. ಅಡಿಗೆ ಸೋಡಾಕ್ಕೆ ನೀರು ಸೇರಿಸುವ ಮೂಲಕ ಮುಂಚಿತವಾಗಿ ತಯಾರು ಮಾಡಿಟ್ಟುಕೊಳ್ಳಿ. ಸೊಳ್ಳೆ ಕಚ್ಚಿದಾಗಲೆಲ್ಲಾ ಅದನ್ನು ಕಚ್ಚಿದ ಪ್ರದೇಶದ ಮೇಲೆ ಹಚ್ಚಿ. ಇದು ದದ್ದುಗಳನ್ನು ತೆಗೆದುಹಾಕುತ್ತದೆ ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ.

ಲೋಳೆರಸ:
ಇದೊಂದು ಉತ್ತಮ ಸೌಂದರ್ಯವರ್ಧಕವಾಗಿದ್ದು, ಚರ್ಮದ ಸಮಸ್ಯೆಯನ್ನು ದೂರಮಾಡುವಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಅಲೋವೆರಾವು ನಿಮ್ಮ ಚರ್ಮದ ಮೇಲಿನ ಸೊಳ್ಳೆ ಕಡಿತದ ಗುರುತನ್ನು ತೆಗೆದುಹಾಕುತ್ತದೆ. ಇದು ಚರ್ಮದ ಮೇಲೆ ತಂಪನ್ನು ನೀಡುತ್ತದೆ. ಸೊಳ್ಳೆ ಕಚ್ಚಿದ ಸ್ಥಳದಿಂದ ರಕ್ತ ಹೊರಬರುತ್ತಿದ್ದರೆ, ಅದನ್ನು ಕೂಡ ಗುಣಪಡಿಸುತ್ತದೆ ಮತ್ತು ಚರ್ಮದ ಮೇಲಿನ ಕಿರಿಕಿರಿ ಮತ್ತು ತುರಿಕೆ ಸಮಸ್ಯೆಯನ್ನು ತೆಗೆದುಹಾಕುತ್ತದೆ.

Exit mobile version