ಪ್ರೌಢ, ಪ್ರಾಥಮಿಕ ಶಾಲೆಗಳಿಗೆ ಏಪ್ರಿಲ್‌ 10 ರಿಂದ ಬೇಸಿಗೆ ರಜೆ!

studemt

ಬೆಂಗಳೂರು : ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಿಗೆ ಏಪ್ರಿಲ್‌ 10 ರಿಂದ ಬೇಸಿಗೆ ರಜೆ ನೀಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಕೋವಿಡ್ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ ಬೇಸಿಗೆ ರಜೆಯಲ್ಲಿ ಕಡಿತ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಏಪ್ರಿಲ್‌ 10 ರಿಂದ ಪ್ರೌಢ, ಪ್ರಾಥಮಿಕ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ ಮಾಡಲಾಗಿದ್ದು, ಮೇ16 ರಿಂದ ಮುಂದಿನ ಶೈಕ್ಷಣಿಕ ವರ್ಷದ ಶಾಲಾರಂಭ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸಲು ತೊಡಕಾದ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸುಮಾರು ಹದಿನೈದು ದಿನಗಳ ಕಾಲ ಕಲಿಕಾ ಚೇತರಿಕಾ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ.

ಈ ನಿಟ್ಟಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷವನ್ನು ಏಪ್ರಿಲ್‌ 9 ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಏಪ್ರಿಲ್‌ 10 ರಿಂದಲೇ ಬೇಸಿಗೆ ರಜೆ ಆರಂಭವಾಗಲಿದೆ. ಮುಂದಿನ ಶೈಕ್ಷಣಿಕ ವರ್ಷ ಈ ಬಾರಿ ಮೇ 16 ರಿಂದಲೇ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ತರಗತಿಗಳಿಗೆ ಪ್ರಸಕ್ತ ಸಾಲಿನ ಪರೀಕ್ಷೆಗಳನ್ನು ನಿಗದಿತ ದಿನಾಂಕದ ಒಳಗೆ ಮುಕ್ತಾಯಗೊಳಿಸಲು ಸೂಚಿಸಲಾಗಿದೆ. 1 ರಿಂದ 7 ನೇ ತರಗತಿಗಳಿಗೆ ಮಾರ್ಚ್ 24 ರಿಂದ ಏಪ್ರಿಲ್‌ 4 ರವರೆಗೆ ಪರೀಕ್ಷೆಯನ್ನು ನಡೆಸಿ, ಏಪ್ರಿಲ್‌ 9 ರಂದು ಫಲಿತಾಂಶ ಪ್ರಕಟಿಸಲು ಸೂಚಿಸಲಾಗಿದೆ. ಇನ್ನು ಪ್ರೌಢ ಶಾಲೆಗಳಿಗೆ ಮಾರ್ಚ್ 21 ರಿಂದ ಮಾರ್ಚ್ 26 ರವರೆಗೆ ವಿಷಯವಾರು ಪರೀಕ್ಷೆ ಹಾಗೂ ಮಾರ್ಚ್ 26 ರಂದು ದೈಹಿಕ ಶಿಕ್ಷಣ ಹಾಗೂ ಇತರೆ ಪರೀಕ್ಷೆಗಳನ್ನು ನಡೆಸಿ, ಏಪ್ರಿಲ್‌ 7 ರಂದು ಫಲಿತಾಂಶ ಪ್ರಕಟಿಸುವಂತೆ ಸೂಚಿಸಿದೆ.

2021-22 ನೇ ಸಾಲಿನಲ್ಲಿ ಪ್ರೌಢಶಾಲೆಗಳಲ್ಲಿ ಏಪ್ರಿಲ್‌ 7 ರಂದು ಶಾಲೆ ಕಾರ್ಯಕ್ರಮ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಎಪ್ರಿಲ್ 9 ರಂದು ನಡೆಯಲಿದೆ. ಅಲ್ಲದೇ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಏಪ್ರಿಲ್‌ 14 ರಂದು ಅಂಬೇಡ್ಕರ್ ಜಯಂತಿ ಆಚರಣೆ ನಡೆಸುವಂತೆ ತಿಳಿಸಲಾಗಿದೆ. ಇನ್ನು 2022-23 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮೇ 14 ರಂದು ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ತಯಾರಿಯನ್ನು ಮಾಡಿಕೊಂಡು ಮೇ 16 ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ನಡೆಸುವಂತೆ ಸೂಚಿಸಲಾಗಿದೆ. ಇನ್ನು ಮೇ 16 ರಿಂದ ಕಲಿಕಾ ಚೇತರಿಕಾ ಕಾರ್ಯಕ್ರಮ ನಡೆಯಲಿದೆ.

ರಾಜ್ಯದಲ್ಲಿ ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಮೇ 29 ರಿಂದ ಆರಂಭಗೊಂಡು ಎಪ್ರಿಲ್ 10 ರಂದು ಮುಕ್ತಾಯವಾಗುತ್ತದೆ. ವರ್ಷಂಪ್ರತಿ ಸುಮಾರು 10 ತಿಂಗಳ ಕಾಲ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದು, ಕನಿಷ್ಠ 220 ದಿನಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ನಡೆಸಲಾಗುತ್ತಿತ್ತು. ಆದ್ರೆ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ಸಾಲಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ಶೇ. 50 ರಿಂದ 60 ರಷ್ಟು ದಿನಗಳಲ್ಲಿ ಮಾತ್ರವೇ ತರಗತಿಗಳನ್ನು ನಡೆಸಲಾಗಿದೆ. ಅದ್ರಲ್ಲೂ 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನೂ ಕಡಿಮೆ ಅವಧಿಯಲ್ಲಿ ಪಾಠವನ್ನು ಬೋಧಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನೆಡೆಯಾಗಿದೆ. ಈ ಹಿನ್ನೆಲೆಯಲ್ಲಿ ರಜೆ ಕಡಿತ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿಕೊಂಡಿದೆ.

ಆದರೆ ಸಾಮಾನ್ಯವಾಗಿ ರಾಜ್ಯದಲ್ಲಿ ಏಪ್ರಿಲ್‌ 14 ರಿಂದ ಬೇಸಿಗೆ ರಜೆ ಆರಂಭಗೊಳ್ಳುತ್ತಿದ್ದು, ಜೂನ್ 1 ರಂದು ಶಾಲಾರಂಭ ನಡೆಯುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳಿಗೆ ನೀಡಲಾಗುತ್ತಿರುವ ಬೇಸಿಗೆ ರಜೆಗೆ ಕತ್ತರಿ ಹಾಕಿರುವುದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ಕಾರಣಕ್ಕೆ ಮಕ್ಕಳು ಆಫ್ ಲೈನ್ ತರಗತಿಗೆ ಹಾಜರಾಗದೇ ಇದ್ದರೂ ಕೂಡ ವಿದ್ಯಾಗಮ, ಆನ್‌ಲೈನ್ ತರಗತಿಯ ಮೂಲಕ ಪಾಠ ಬೋಧನೆ ಮಾಡಿದ್ದಾರೆ. ಜೊತೆಗೆ ಕೋವಿಡ್ ಕರ್ತವ್ಯವನ್ನೂ ನಿರ್ವಹಿಸಿದ್ದಾರೆ. ಜೊತೆಗೆ ಎಪ್ರಿಲ್ 10 ರಿಂದ ಬೇಸಿಗೆ ರಜೆ ಆರಂಭವಾಗುತ್ತಿದ್ದರೂ ಕೂಡ ಎಸ್ಎಸ್ಎಲ್ ಸಿ ಮೌಲ್ಯ ಮಾಪನಕ್ಕೆ ಪ್ರೌಢಶಾಲಾ ಶಿಕ್ಷಕರು ಭಾಗವಹಿಸಬೇಕಾಗಿದೆ. ಹೀಗಾಗಿ ರಜೆಯ ಅವಧಿಯನ್ನು ಕಡಿತ ಮಾಡಬಾರದು ಅಂತ ಶಿಕ್ಷಕರು ಆಗ್ರಹಿಸುತ್ತಿದ್ದಾರೆ.

Exit mobile version