ಹಿಜಾಬ್‍ಗೆ ‘ನೋ’ ಎಂದ ಹೈಕೋರ್ಟ್!

hijab

ಕರ್ನಾಟಕ ಸೇರಿದಂತೆ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡಿದ್ದ, ಹಿಜಾಬ್ ವಿವಾದದ ಕುರಿತು ಕೊನೆಗೂ ಕರ್ನಾಟಕ ಹೈಕೋರ್ಟ್‍ನ ತೀರ್ಪು ಪ್ರಕಟವಾಗಿದೆ. ‘ಹಿಜಾಬ್ ನಮ್ಮ ಧಾರ್ಮಿಕ ಹಕ್ಕು. ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು’ ಎಂದು ಉಡುಪಿಯ ಆರು ಜನ ವಿದ್ಯಾರ್ಥಿನಿಯರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ರಾಜ್ಯದೆಲ್ಲೆಡೆ ಧರ್ಮಯುದ್ದವನ್ನೇ ಸೃಷ್ಟಿಸಿತ್ತು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ, ನಾವೂ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತೇವೆ ಎಂದು ಹಿಂದೂ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು. ಈ ಹಿಜಾಬ್-ಕೇಸರಿ ಸಂಘರ್ಷ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ಇನ್ನು ಈ ಅರ್ಜಿಯನ್ನು ಪ್ರಾರಂಭದಲ್ಲಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿ, ನಂತರ ಈ ಅರ್ಜಿಯನ್ನು ಹೈಕೋರ್ಟ್‍ನ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದ್ದರು. ಮುಖ್ಯನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್. ದೀಕ್ಷಿತ್, ನ್ಯಾ. ಜೆಎಂ ಖಾಜಿ ಅವರನ್ನೊಳಗೊಂಡ ಪೀಠ ಸುದಿರ್ಘವಾದ ವಾದ-ಪ್ರತಿವಾದಗಳನ್ನು ಆಲಿಸಿತ್ತು.
ಈಗ ತೀರ್ಪು ನೀಡಿರುವ ತ್ರಿಸದಸ್ಯ ಪೀಠ, ಕಾಲೇಜುಗಳಲ್ಲಿ ಹಿಜಾಬ್ ಧರಿಸುವಂತಿಲ್ಲ. ಹಿಜಾಬ್ ಧರಿಸುವುದು ವಿದ್ಯಾರ್ಥಿನಿಯರ ಧಾರ್ಮಿಕ ಹಕ್ಕಿನಡಿ ಬರುವುದಿಲ್ಲ. ಶಾಲಾ ಕಾಲೇಜಿನಲ್ಲಿ ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಿ, ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಕಾನೂನು ಬದ್ದವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ಮೂಲಕ ಹಿಜಾಬ್ ವಿವಾದದಲ್ಲಿ ರಾಜ್ಯ ಸರ್ಕಾರದ ವಾದಕ್ಕೆ ಹೈಕೋರ್ಟ್ ಮನ್ನಣೆ ನೀಡಿದೆ. ಇನ್ನು ಅರ್ಜಿದಾರರ ಪರ ಹೈಕೋರ್ಟ್‍ನ ಖ್ಯಾತ ವಕೀಲ ದೇವದತ್ ಕಾಮತ್ ವಾದಮಂಡಿಸಿದ್ದರೆ, ಸರ್ಕಾರದ ಪರ ಅಡ್ವೋಕೆಟ್ ಜನರಲ್ ಪ್ರಭುಲಿಂಗ್ ನಾವದಗಿ ಪ್ರತಿವಾದ ಮಂಡಿಸಿದ್ದರು. ಮುಖ್ಯನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ಈ ಪೂರ್ಣಪೀಠ ಇಂದು ಅಂತಿಮ ತೀರ್ಪು ನೀಡಿದೆ. ಇದಕ್ಕೂ ಮೊದಲು ಪೀಠವು ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಗುರುತನ್ನು ಬಳಸುವಂತಿಲ್ಲ ಎಂದು ಮಧ್ಯಂತರ ತೀರ್ಪು ನೀಡಿತ್ತು.

Exit mobile version