Islamabad : 2024ರಲ್ಲಿ ನಡೆಯಲಿರುವ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ(Election of Pakistan) ಸ್ಪರ್ಧೆ ಮಾಡಲು ಮೊದಲ ಬಾರಿಗೆ ಹಿಂದೂ ಮಹಿಳೆ (Hindu woman) ನಾಮಪತ್ರ ಸಲ್ಲಿಸಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದ ಬುನರ್ ಜಿಲ್ಲೆಯ ಹಿಂದೂ ಸಮುದಾಯದ ಡಾ. ಸವೀರಾ ಪ್ರಕಾಶ್ (Dr. Saveera Prakash) ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು 2022ರಲ್ಲಿ ಅಬೋಟಾಬಾದ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜಿನ (Abbottabad International Medical College) ಪದವೀಧರರಾದ ಡಾ ಸವೀರಾ ಪ್ರಕಾಶ್ (Dr Saveera Prakash) ಅವರು ಬುನರ್ನಲ್ಲಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮಹಿಳಾ ವಿಭಾಗದಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಹೊಂದಿದ್ದಾರೆ. ಡಾ. ಸವೀರಾ ಪ್ರಕಾಶ್ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಟಿಕೆಟ್ನಲ್ಲಿ ಚುನಾವಣೆಗೆ ಸ್ಪರ್ಧಿಸುವ ಭರವಸೆಯಲ್ಲಿದ್ದಾರೆ. ಆಕೆಯ ತಂದೆ, ಓಮ್ ಪ್ರಕಾಶ್, ನಿವೃತ್ತ ವೈದ್ಯರಾಗಿದ್ದು, ಕಳೆದ 35 ವರ್ಷಗಳಿಂದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸಕ್ರಿಯ ಸದಸ್ಯರಾಗಿದ್ದರು.
ಕ್ವಾಮಿ ವತನ್ (Kwami Watan) ಪಾರ್ಟಿಯೊಂದಿಗೆ ಸಂಬಂಧ ಹೊಂದಿರುವ ಸ್ಥಳೀಯ ರಾಜಕಾರಣಿ ಸಲೀಂ ಖಾನ್, ಮುಂಬರುವ ಸಾರ್ವತ್ರಿಕ ಸ್ಥಾನದ ಚುನಾವಣೆಗೆ ಸವೀರಾ ಪ್ರಕಾಶ್ ಅವರು ಬುನರ್ನಿಂದ ನಾಮಪತ್ರ ಸಲ್ಲಿಸಿದ ಮೊದಲ ಮಹಿಳೆಯಾಗಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಪಾಕಿಸ್ತಾನದ ಮಹಿಳೆಯರ ಯೋಗಕ್ಷೇಮಕ್ಕಾಗಿ ಕೆಲಸ ಮಾಡಲು, ಸುರಕ್ಷಿತ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಅವರ ಹಕ್ಕುಗಳಿಗಾಗಿ ಪ್ರತಿಪಾದಿಸಲು ನಾನು ಸ್ಪರ್ಧೆ ಮಾಡುತ್ತಿರುವುದಾಗಿ ಡಾ. ಸವೀರಾ ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ (Pakistan) ಖೈಬರ್ ಪಖ್ತುಂಕ್ವಾದ ಬುನರ್ ಜಿಲ್ಲೆಯ ಪ್ರಭಾವಿ ರಾಜಕೀಯ ನೇತಾರ ಇಮ್ರಾನ್ ನೋಶಾದ್ ಖಾನ್ ಅವರು ಡಾ. ಸವೀರಾ ಅವರ ಸ್ಪರ್ಧೆಗೆ ಸಂಪೂರ್ಣ ಬೆಂಬಲವನ್ನು ತಿಳಿಸಿದ್ದಾರೆ. ಬುನರ್ ಪಾಕಿಸ್ತಾನದೊಂದಿಗೆ ವಿಲೀನಗೊಂಡಾಗಿನಿಂದ ಮಹಿಳೆ ಮುಂದೆ ಹೆಜ್ಜೆ ಹಾಕಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು 55 ವರ್ಷಗಳನ್ನು (55 years)ತೆಗೆದುಕೊಂಡಿತು ಎಂದಿದ್ದಾರೆ.