ವಿದೇಶದಿಂದ ಆಗಮಿಸುವವರಿಗೆ ಹೋಮ್‌ ಕ್ವಾರಂಟೈನ್ ಕಡ್ಡಾಯ

ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಹೋಮ್‌ ಕ್ವಾರಂಟೈನ್‌ ಆಗಲು ಸರ್ಕಾರ ಸೂಚಿಸಿದೆ. ಭಾರತಕ್ಕೆ ಬರುವ ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 7 ದಿನಗಳ ಕಾಲ ಕಡ್ಡಾಯ ಹೋಮ್ ಕ್ವಾರಂಟೈನ್ ಅನ್ನು ವಿಧಿಸಲಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಪ್ರಸ್ತುತ ದೇಶದಲ್ಲಿ ಕೋವಿಡ್ -19 ಹೊಸ ರೂಪಾಂತರ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ  ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಕೇರಳದಲ್ಲಿ ಇದುವರೆಗೆ 280 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ ಮತ್ತು ಕಡಿಮೆ ಅಪಾಯದ ದೇಶಗಳಿಂದ ಬಂದವರಿಂದ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಹೇಳಿದ್ದಾರೆ

ಕೊರೋನಾ ವೈರಸ್ ಮತ್ತು ಓಮಿಕ್ರಾನ್ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇರಳ ಸರ್ಕಾರ ಕೂಡ ವಿದೇಶದಿಂದ ಬರುವ ಎಲ್ಲರಿಗೂ ಒಂದು ವಾರ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಕೋವಿಡ್ ಅಪಾಯದಲ್ಲಿರುವ ನಿರ್ದಿಷ್ಟ ದೇಶಗಳ ಪ್ರಯಾಣಿಕರು ಭಾರತಕ್ಕೆ ಆಗಮಿಸಿದ ಕೂಡಲೇ ಕೋವಿಡ್ ಪರೀಕ್ಷೆಗಾಗಿ ತಮ್ಮ ಮಾದರಿಗಳನ್ನು ನೀಡಬೇಕು ಮತ್ತು ಹೊಸ ನಿಯಮಗಳ ಪ್ರಕಾರ ಅವರ ಪರೀಕ್ಷಾ ಫಲಿತಾಂಶ ಬಂದ ನಂತರವೇ ಅವರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿಸಲಾಗುತ್ತದೆ.

Exit mobile version