ಹೆಣ್ಣು ಗರ್ಭಿಣಿಯಾದ ಸಂದರ್ಭದಲ್ಲಿ ಅವಳ ಆರೈಕೆ ಹೇಗಿರಬೇಕು? ಇಲ್ಲಿದೆ ಅದಕ್ಕೆ ಉತ್ತರ!

pregnant

ತನ್ನ ಗರ್ಭದಲ್ಲಿ ಜೀವವೊಂದು ಮೊಳಕೆಯೊಡೆಯುವ ಸಂದರ್ಭದಲ್ಲಿ ಒಂದು ಹೆಣ್ಣುಅಕ್ಷರಶಃ ತಾನೆ ಮಗುವಿನಂತಾಗುತ್ತಾಳೆ. ಹೇಗೆ ಎಂದಿರಾ? ಅಂತಹ ಸಮಯದಲ್ಲಿ ಮೊಟ್ಟ ಮೊದಲು ಬಯಸುವುದೇ ಪತಿಯ ಬೆಚ್ಚಗಿನ ಆಸರೆ, ಪ್ರೀತಿ, ಕಾಳಜಿ. ಒಂದು ಹೆಣ್ಣು ಮದುವೆಯಾಗಿ ತನ್ನವರನ್ನೆಲ್ಲ ಬಿಟ್ಟು ಗಂಡನೇ ಸರ್ವಸ್ವ ಎಂದು ನಂಬಿಕೊಂಡು ಅವನ ಜೊತೆ ಬರುತ್ತಾಳೆ. ಗರ್ಭ ಧರಿಸಿದ ಮೊದಲ 3-4 ತಿಂಗಳು ಊಟ ಸೇರದೆ ಪಡುವ ಕಷ್ಟ, ವಾಂತಿ, ಸಂಕಟ ಇವೆಲ್ಲ ಅಸಹನೀಯ. ಆದರೆ ಜೀವನ ಸಂಗಾತಿಯ ಆಸರೆ ಕಾಳಜಿ ಇದ್ದರೆ ಅಸಹನೀಯವು ಸಹನೀಯವಾಗುತ್ತದೆ ಅಲ್ಲವೇ? 

ಈ 9 ತಿಂಗಳು ಅನ್ನೋದು ಸುಲಭವಲ್ಲ! ಹಾರ್ಮೋನ್ ವ್ಯತ್ಯಾಸದಿಂದ ಕೆಲವರಲ್ಲಿ ಉಂಟಾಗುವ ಖಿನ್ನತೆ ಗರ್ಭಿಣಿ ಮಹಿಳೆಯ ನೆಮ್ಮದಿಯನ್ನೇ ಕಸಿದುಕೊಂಡು ಬಿಡುತ್ತದೆ. ಅಂತಹ ಸಮಯದಲ್ಲಿ ಅವಳನ್ನು ಅರ್ಥ ಮಾಡಿಕೊಂಡು ಅವಳ ಕೋಪ-ತಾಪ, ಅಳು-ನಗು ಎಲ್ಲವನ್ನು ತಾಳ್ಮೆಯಿಂದ  ನಿಭಾಯಿಸಬೇಕಾದ್ದದ್ದು ಗಂಡನ ಕರ್ತವ್ಯ ಅಲ್ಲವೇ?  ಪೌಷ್ಟಿಕ ಆಹಾರ, ಡಾಕ್ಟರ್ ತಪಾಸಣೆ ಇಷ್ಟೇನಾ ಗಂಡನ ಕರ್ತವ್ಯ? ಇದೆಲ್ಲಕ್ಕಿಂತ ಮುಖ್ಯ ಅವಳ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು.

ಮನಸ್ಸು ನೋಯಿಸದೆ ಇರುವುದು, ಬೇಸರವಾದಾಗ, ಅಳುವಾಗ, ಖಿನ್ನಳಾಗಿ ಕುಳಿತಾಗ ಸಮಾಧಾನ ಮಾಡುವುದು, ನೀನು ಒಂಟಿಯಲ್ಲ ನಿನ್ನ ಜೊತೆ ನಾನಿದ್ದೇನೆ ಎಂಬ ಭರವಸೆಯ ನುಡಿ, ಇದಲ್ಲದೆ ಬೇರೇ ಏನ್ನನ್ನು ಒಬ್ಬ ಹೆಣ್ಣು ಬಯಸುವುದಿಲ್ಲ. ಆ 9 ತಿಂಗಳು ಅವಳೇ ಒಂದು ಮಗುವಿನಂತಾಗಿರುತ್ತಾಳೆ, ಅವಳ ಮನಸ್ಸು ಅಷ್ಟು ಸೂಕ್ಷ್ಮವಾಗಿರುತ್ತದೆ. ಯಾವುದೇ ಶಾಕ್ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಗಂಡ ತನ್ನ ತಾಳ್ಮೆ ತೋರಿಸಬೇಕಾದ ಸೂಕ್ತ  ಮತ್ತು ಅಗತ್ಯ ಸಮಯವದು. ಮಗು ತಾಯಿಯ ಮಡಿಲು ಸುರಕ್ಷಿತ ಅಂದುಕೊಂಡಂತೆ, ಆಕೆ ತನ್ನ ಗಂಡನ ಸುರಕ್ಷಿತ ಆಸರೆ ಬಯಸುತ್ತಾಳೆ.

ತನ್ನನ್ನು ಗಂಡ ಮಗುವಿನಂತೆ ಕಾಳಜಿ ಮಾಡಬೇಕೆಂದು ಬಯಸುತ್ತಾಳೆ. ತಪ್ಪೇ? ಅಂತಹ ಗಂಡನೇ ಅವಳ ಮನಸ್ಸಿಗೆ ಘಾಸಿ ಮಾಡಿದರೆ ಪರಿಣಾಮ? ಎಲ್ಲಾ ಗಂಡಂದಿರಿಗೂ ಒಂದು ಸಣ್ಣ ಮನವಿ, ನಿಮ್ಮ ಮಗುವನ್ನು ಒಡಲಲ್ಲಿ ಹೊತ್ತು ಮಗುವಿನಂತಾದ ಮಡದಿಯ ಮನಸ್ಸನ್ನು ದಯವಿಟ್ಟು ಈ ಸಮಯದಲ್ಲಿ  ನೋಯಿಸಬೇಡಿ! ಗರ್ಭಿಣಿ ಹೆಣ್ಣು ಮನಸಲ್ಲಿ ನೋವಿಟ್ಟುಕೊಂಡು ಕೊರಗುತ್ತಿದ್ದರೆ  ಮುಂದೆ ಹೆರಿಗೆಯಾದ ನಂತರ ಬಹಳ ಕೆಟ್ಟ ಪರಿಸ್ಥಿತಿಯನ್ನು ಆಕೆ ಎದುರಿಸುವ ಸಂದರ್ಭ ಬರಬಹುದು.

ದಯವಿಟ್ಟು ಆಕೆಯ ಮನಸ್ಥಿತಿಯ ಮೇಲೆ ಗಮನವಿಡಿ, ಕಾಳಜಿಯಿರಲಿ. ಸಂಸಾರದಲ್ಲಿ ಸಮಸ್ಯೆ ವೈಮನಸ್ಸು ಸಹಜ, ಆದರೆ ಅದನ್ನು ಬಗೆಹರಿಸಿಕೊಳ್ಳಲು ಜೀವನ ಪೂರ್ತಿ ಸಮಯವಿದೆ. ದಯವಿಟ್ಟು ಹೆಣ್ಣನ್ನು ಈ ಸಮಯದಲ್ಲಿ ಮಗುವಿನಂತೆ ನೋಡಿಕೊಳ್ಳಿ. ಗಂಡನ ಪ್ರೀತಿ ಕಾಳಜಿ ಬೆಂಬಲ ಬಯಸುವ ಅವಳಿಗೆ ನಿರಾಶೆ ಮಾಡಬೇಡಿ. “ನನ್ನ ಜೊತೆ ಸ್ವಲ್ಪ ಸಮಯ ಕಳೆಯಿರಿ” ಎಂಬಂತಹ ಚಿಕ್ಕ ಚಿಕ್ಕ ಬಯಕೆಗಳನ್ನು ನಿರ್ಲಕ್ಷಿಸಬೇಡಿ.

ನಿಮಗೆ ಇವೆಲ್ಲ ಚಿಕ್ಕ ಪುಟ್ಟ ವಿಷಯ ಅನ್ನಿಸಬಹುದು. ಆದರೆ ಇವೇ ಮುಂದೆ ಅವಳ ಮನಸಲ್ಲಿ ಮಾಯದ ಗಾಯವಾಗಿ ಉಳಿದು ಬಿಡಬಹುದು. ಗರ್ಭಿಣಿ ಹೆಂಡತಿಯ ಕಣ್ಣಲ್ಲಿ ನೀರು ಹಾಕಿಸದೆ, ಮೊದಲ ಹೆರಿಗೆ ತವರು ಮನೆಯಲ್ಲಿ ಆಗಬೇಕು, ಹಾಸ್ಪಿಟಲ್ ಬಿಲ್ ತವರು ಮನೆಯವರೇ  ಕೊಡಬೇಕು ಇಂತಹ ಸಂಕುಚಿತ ಮನೋಭಾವ ತೊರೆದು, ಹೆರಿಗೆ ಸಮಯದಲ್ಲಿ ಗಂಡ ಜೊತೆಗಿರಬೇಕು ಎಂಬ ಬಯಕೆ ಈಡೇರಿಸಿ, ತಾನು ಒಂಟಿ ಎನ್ನುವಂತಹ ಭಾವನೆ ಬರದಂತೆ ನೋಡಿಕೊಳ್ಳಿ.

Exit mobile version