ಹೆಣ್ಣು ಋತುಮತಿಯಾದಾಗ ನೈರ್ಮಲ್ಯ ಕಾಪಾಡಿಕೊಳ್ಳುವುದು ಹೇಗೆ?

ಪ್ರತಿ ಹೆಣ್ಣಿನ ದೇಹದಲ್ಲಿ ನಡೆಯುವ ಒಂದು ಸುಂದರ ಹಾಗೂ ಪ್ರಮುಖ ಪ್ರಕ್ರಿಯೆಗಳಲ್ಲಿ ಒಂದು ಋತುಸ್ರಾವ. ಒಂದು ಹೆಣ್ಣು ಮತ್ತೊಂದು ಜೀವವನ್ನ ಸೃಷ್ಟಿಸಬೇಕಾದರೆ ಇದು ಅತ್ಯಗತ್ಯ. ಹೀಗಿರುವಾಗ ನಮ್ಮ ಮೊದಲ ಮುಟ್ಟು ಅಥವಾ ಋತುಮತಿಯಾಗುವ ವೇಳೆಯಲ್ಲಿ ಚಡಪಡಿಕೆ ಇರುವುದು ಸಾಮಾನ್ಯ. ಮುಟ್ಟಿನ ಸಮಯದಲ್ಲಿ ಹೇಗಿರಬೇಕು?, ತಮ್ಮ ನೈರ್ಮಲ್ಯ ಕಾಪಾಡಿಕೊಳ್ಳುವುದು ಹೇಗೆ? ಇಂತಹ ಗೊಂದಲಗಳು ಹುಡುಗಿಯರನ್ನ ಕಾಡುತ್ತಿರುತ್ತದೆ. ಅದಕ್ಕಾಗಿ ಈ ಲೇಖನ.

ಋತುಮತಿಯಾದ ಸಂದರ್ಭದಲ್ಲಿ ತಮ್ಮ ನೈರ್ಮಲ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ:

ನಿಮ್ಮ ನೈರ್ಮಲ್ಯ ವಿಧಾನವನ್ನು ಆರಿಸಿ:
ಸ್ಯಾನಿಟರಿ ಪ್ಯಾಡ್‌ಗಳು, ಟ್ಯಾಂಪೂನ್ ಗಳಿಂದ ಮುಟ್ಟಿನ ಕಪ್‌ಗಳವರೆಗೆ ಪ್ರತಿಯೊಬ್ಬ ಮಹಿಳೆ ತನಗೆ ಗರಿಷ್ಠ ಆರಾಮವನ್ನು ನೀಡುವ ಉತ್ಪನ್ನವನ್ನು ಆರಿಸಿಕೊಳ್ಳಬೇಕು. ಒಂದು ಸಮಯದಲ್ಲಿ ನೈರ್ಮಲ್ಯದ ಒಂದು ವಿಧಾನವನ್ನು ಮಾತ್ರ ಬಳಸಬೇಕು ಎಂಬುದನ್ನು ನೆನಪಿನಲ್ಲಿಡಿ. ಅನೇಕ ವಿಧಾನವನ್ನು ಬಳಸುವುದರಿಂದ ದದ್ದುಗಳು, ಸೋಂಕುಗಳು ಅಥವಾ ಕೆಲವೊಂದು ಅಪಾಯಕಾರಿ ಸಿಂಡ್ರೋಮ್‌ಗೆ ಕಾರಣವಾಗಬಹುದು.

ಸರಿಯಾದ ವ್ಯಕ್ತಿಗೆ ಪ್ರಶ್ನೆಗಳನ್ನು ಕೇಳಿ:
“ಮೊದಲ ಬಾರಿಗೆ ಮುಟ್ಟಾಗುವ ಹುಡುಗಿಯರು ಬಹಳಷ್ಟು ಪ್ರಶ್ನೆಗಳನ್ನು ಹೊಂದಿರುತ್ತಾರೆ. ಅದನ್ನು ಈಗಿನಿಂದಲೇ ಪರಿಹರಿಸಬೇಕು. ಮುಟ್ಟಿನ ನೈರ್ಮಲ್ಯದ ಮಹತ್ವವನ್ನು ಅರಿತುಕೊಳ್ಳು ಅವರಿಗೆ ಸರಿಯಾದ ಮಾರ್ಗದರ್ಶನ ಬೇಕಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ತಜ್ಞ ಅಥವಾ ವೈದ್ಯರನ್ನು ಸಂಪರ್ಕಿಸುವುದು ಈ ಕುರಿತು ಇರುವ ಸರಿಯಾದ ಮಾರ್ಗವಾಗಿದೆ.

ಮೂಢನಂಬಿಕೆಗಳಿಗೆ ಒತ್ತು ನೀಡಬೇಡಿ:
ಮೊದಲಿಗೆ ನಿಮ್ಮ ದೇಹವು ವಿಶ್ರಾಂತಿ ಮತ್ತು ಆರಾಮದಾಯಕವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಈ ಸಮಯದಲ್ಲಿ ಚೆನ್ನಾಗಿ ವಿಶ್ರಾಂತಿ ಪಡೆಯಿರಿ. ಈ ದಿನಗಳಲ್ಲಿ ಮಹಿಳೆಯರು ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು, ಅದನ್ನು ಅಪಶಕುನ ಎಂದು ಸಾರುವ ಮೂಢನಂಬಿಕೆಗಳಿಗೆ ಕಿವಿಗೊಡಬೇಡಿ. ಈ ಅವಧಿಯಲ್ಲಿ ಮಹಿಳೆಯರನ್ನು ಸಕ್ರಿಯವಾಗಿರಲು ಪ್ರೋತ್ಸಾಹಿಸಬೇಕು. ಮುಟ್ಟು ಜೀವನದ ಭಾಗ ಎಂಬುದನ್ನು ಅರ್ಥ ಮಾಡಿಸಬೇಕು.

ನಿಯಮಿತವಾಗಿ ಸ್ನಾನ ಮಾಡಿ:
ಮುಟ್ಟು ಎಂದರೆ ಸೋಂಕಿಗೆ ಕಾರಣವಾಗುವ ಹೆಚ್ಚುವರಿ ರಕ್ತವನ್ನು ತೆಗೆದುಹಾಕುವುದಾಗಿದೆ. ಆದ್ದರಿಂದ ಈ ಅವಧಿಗಳಲ್ಲಿ ನಿಯಮಿತವಾಗಿ ಸ್ನಾನ ಮಾಡುವುದು ಮುಖ್ಯ. ಇದು ಮನಸ್ಥಿತಿಯನ್ನು ನಿವಾರಿಸಲು ಮತ್ತು ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೌಮ್ಯವಾದ ಶಾಖ ನೀಡುವ ಮೂಲಕ ನಿಮ್ಮ ಅವಧಿಯ ನೋವನ್ನು ಸಹ ನೀವು ನಿವಾರಿಸಬಹುದು. ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸೌಮ್ಯವಾದ ಫೋಮಿಂಗ್ ಕ್ಲೆನ್ಸರ್ ಅನ್ನು ಬಳಸಬಹುದು.

ಮಿನಿ ಕಿಟ್‌ನೊಂದಿಗೆ ಯಾವಾಗಲೂ ಸಿದ್ಧರಾಗಿರಿ:
ನಿಮಗೆ ಅಗತ್ಯವಿರುವ ಎಲ್ಲಾ ಅಗತ್ಯ ಸಾಮಗ್ರಿಗಳೊಂದಿಗೆ ಮೊದಲೇ ಸಿದ್ಧರಾಗಿರುವುದು ಮುಟ್ಟಿನ ದಿನಗಳನ್ನು ಎದುರಿಸಲು ಪ್ರಯೋಜನಕಾರಿ. ನಿಮ್ಮ ಹಿಂದಿನ ತಿಂಗಳ ಮುಟ್ಟಿನ ದಿನಾಂಕವನ್ನು ನೆನಪಿಟ್ಟುಕೊಂಡು, ಅದು ಹತ್ತಿರ ಬರುತ್ತಿದ್ದ ಹಾಗೇ, ನೀವು ಎಲ್ಲೇ ಹೋಗುತ್ತಿದ್ದರೂ ನಿಮಗೆ ಮುಟ್ಟನ್ನು ಎದುರಿಸಲು ಅಗತ್ಯವಿರುವ ಮಿನಿ ಕಿಟ್ ನ್ನು ಜೊತೆಗೆ ತೆಗೆದುಕೊಂಡು ಹೋಗಿ. ಇದು ನಿಮಗೆ ಸನ್ನಿವೇಶವನ್ನು ಸರಿಯಾಗಿ ಎದುರಿಸಲು ಸಹಾಯ ಮಾಡುವುದಲ್ಲದೇ, ನಿಮ್ಮ ಚಿಂತೆಯನ್ನು ದೂರ ಮಾಡುತ್ತದೆ.

Exit mobile version