ಷೇರು ಮಾರುಕಟ್ಟೆಯ ಡಿಮ್ಯಾಟ್ ಬಗೆಗಿನ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!

ಹಲವರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕೆಂಬ ಹಂಬಲವಿರುತ್ತದೆ. ಆದರೆ ಹೇಗೆ ಹೂಡಿಕೆ ಮಾಡಬೇಕು ಹಾಗೂ ಹೇಗೆ ಡಿಮ್ಯಾಟ್ ಅಕೌಂಟ್ ತೆರೆಯಬೇಕೆಂಬ ಗೊಂದಲ ಕೆಲವರಲ್ಲಿ ಇರುತ್ತದೆ ಹಾಗೂ ಡಿಮ್ಯಾಟ್ ಖಾತೆ ಎಂದರೇನು? ಡಿಮ್ಯಾಟ್ ಖಾತೆ ತೆರೆಯುವುದರಿಂದ ಏನೇನು ಅನುಕೂಲ ಎಂಬ ಬಗ್ಗೆ ಇಲ್ಲಿದೆ ಉತ್ತರ.
ಡಿಮ್ಯಾಟ್ ಎಂದರೆ, ಡಿಮೆಟೀರಿಯಲೈಸ್ಡ್ ಖಾತೆ. ಇದು ಬ್ಯಾಂಕ್ ಖಾತೆಯಂತೆಯೇ ಕಾರ್ಯ ನಿರ್ವಹಿಸುತ್ತದೆ. ಖಾತೆ ಹೊಂದಿರುವವರ ಷೇರು ವ್ಯವಹಾರಗಳು (ಷೇರು ಮಾರಾಟ ಮತ್ತು ಖರೀದಿ) ಹಾಗೂ ಅವರ ವಿವರಗಳನ್ನು ನಿರ್ವಹಿಸಬಹುದು.

ಡಿಮ್ಯಾಟ್ ಖಾತೆ ತೆರೆಯುವುದರ ಉಪಯೋಗಗಳು :
• ಭದ್ರತಾ ಪತ್ರಗಳನ್ನು ಕಾಪಾಡಿಕೊಳ್ಳಲು ಸುರಕ್ಷಿತ ಹಾಗೂ ಅನುಕೂಲಕರ ವಿಧಾನ
• ಭದ್ರತಾ ಪತ್ರಗಳ ತತ್ ಕ್ಷಣದ ವರ್ಗಾವಣೆಯ ಅವಕಾಶ
• ಭದ್ರತಾ ಪತ್ರಗಳ ವರ್ಗಾವಣೆಗೆ ಸ್ಟ್ಯಾಂಪ್ ಡ್ಯೂಟಿ ಅಗತ್ಯವಿಲ್ಲದಿರುವುದು
• ಭೌತಿಕ ಪತ್ರಗಳಿಂದ ಉಂಟಾಗಬಹುದಾದ ಕಳಪೆ ಬಟವಾಡೆ, ಹುಸಿ ಭದ್ರತೆ, ವಿಳಂಬ, ಕಳ್ಳತನ ಮೊದಲಾದ ಆತಂಕಗಳ ನಿರ್ಮೂಲನೆ
• ಭದ್ರತಾ ಪತ್ರಗಳನ್ನು ವರ್ಗಾವಣೆಯಲ್ಲಿ ಕಾಗದ ಪತ್ರಗಳ ನಿರ್ವಹಣಾ ಕಾರ್ಯಗಳಲ್ಲಿ ಕಡಿತ.
• ವ್ಯಾವಹಾರಿಕ ವೆಚ್ಚದಲ್ಲಿ ಕಡಿತ.
• ಹೊರೆಯಾಗುವ ಸಮಸ್ಯೆ ಇರುದಿಲ್ಲ, ಕೇವಲ ಒಂದು ಷೇರನ್ನು ಕೂಡ ಮಾರಾಟ ಮಾಡಬಹುದು.


• ನಾಮ ನಿರ್ದೇಶನ(ನಾಮಿನೇಶನ್) ಮಾಡಬಹುದಾದ ಅವಕಾಶ
• ಡಿಪಿಯಲ್ಲಿ ದಾಖಲುಗೊಂಡ ವಿಳಾಸ ಬದಲಾವಣೆಯು ಹೂಡಿಕೆದಾರನ ಭದ್ರತಾ ಪತ್ರ ಇರುವ ಎಲ್ಲ ಕಂಪನಿಯ ದಾಖಲೆಗಳಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೇ ನೋಂದಾವಣೆಯಾಗಿಬಿಡುತ್ತದೆ.


ಹಾಗಾದ್ರೆ ಡಿಮ್ಯಾಟ್ ಖಾತೆ ನಿರ್ವಹಿಸುವುದು ಹೇಗೆ ?

ಡಿಮ್ಯಾಟ್ ಖಾತೆಯಲ್ಲಿ ಷೇರು ಹಾಗೂ ಸೆಕ್ಯುರಿಟಿಗಳು (ಭದ್ರತಾಪತ್ರಗಳು) ಭೌತಿಕ ಸರ್ಟಿಫಿಕೇಟು(physical forms) ಗಳ ಬದಲಾಗಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಇರಿಸಲ್ಪಟ್ಟಿರುತ್ತವೆ. ಹೂಡಿಕೆದಾರನು ಹೂಡಿಕೆ ದಲ್ಲಾಳಿಯೊಡನೆ (ಅಥವಾ ಉಪ ದಲ್ಲಾಳಿಯೊಡನೆ) ನೋಂದಾವಣೆ ಮಾಡಿಕೊಳ್ಳುವ ಮೂಲಕ ಡಿಮ್ಯಾಟ್ ಖಾತೆಯನ್ನು ತೆರೆಯಬಹುದು. ಖಾತೆಯನ್ನು ತೆರೆದ ನಂತರ ನಿಮಗೆ ಖಾತೆ ಸಂಖ್ಯೆ ಹಾಗೂ ಡಿಪಿ ಗುರುತಿನ ಸಂಖ್ಯೆಗಳನ್ನು ನೀಡಲಾಗುತ್ತದೆ ಮತ್ತು ಇದನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನಡೆಸುವ ಎಲ್ಲ ವ್ಯವಹಾರಗಳಲ್ಲಿಯೂ ನಮೂದಿಸಬೇಕಾಗುತ್ತದೆ.

ಡಿಮ್ಯಾಟ್ ಖಾತೆ ತೆರೆಯಲು ಅಂತರ್ಜಾಲ ಪಾಸ್ವರ್ಡ್ ಮತ್ತು ವ್ಯವಹಾರ ಪಾಸ್ವರ್ಡ್ಗಳು ಬೇಕಾಗುತ್ತವೆ. ಹಾಗೆಯೇ ಸೆಕ್ಯುರಿಟಿಗಳ ವರ್ಗಾವಣೆ ಅಥವಾ ಖರೀದಿಯ ಧೃಢಿಕರಣ ಬೇಕಾಗುತ್ತದೆ. ಒಮ್ಮೆ ವ್ಯವಹಾರಕ್ಕೆ ಚಾಲನೆ ದೊರೆತು ಪೂರ್ಣಗೊಂಡ ನಂತರ ಡಿಮ್ಯಾಟ್ ಖಾತೆಯ ಮೇಲಿನ ಸೆಕ್ಯುರಿಟಿಗಳ ಕೊಳ್ಳುವಿಕೆ ಹಾಗೂ ಮಾರಾಟಗಳು ಯಾಂತ್ರಿಕವಾಗಿ ಸಾಗುತ್ತವೆ.

Exit mobile version