ಕೊರೊನಾ ಬಂದಿದೆ ಎಂದು ಹೇಳುವ ಮೊದಲ ಲಕ್ಷಣ ಅಂದ್ರೆ, ಅದು ವಾಸನೆ ಮತ್ತು ರುಚಿ ಇಲ್ಲದೇ ಇರುವುದು. ಇದನ್ನು ಅನೋಸ್ಮಿಯಾ ಎಂದೂ ಕರೆಯುತ್ತಾರೆ. ಕೆಲವು ಜನರಿಗೆ, ಇದು ಅವರ ದೇಹದಲ್ಲಿ ವೈರಸ್ ಇದೆ ಎಂದು ತೋರಿಸುವ ಏಕೈಕ ಚಿಹ್ನೆಯೂ ಆಗಿದೆ. ಕೊರೊನಾದಿಂದ ಗುಣಮುಖ ಆದಮೇಲೆ ರುಚಿ ಬೇಗನೆ ಹಿಂತಿರುಗುವುದು, ಆದರೆ ವಾಸನೆ ಹಿಂದಿರುಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ನೀವೇನಾದರೂ ಕೊರೊನಾದಿಂದ ಚೇತರಿಸಿಕೊಂಡಿದ್ದು, ಇನ್ನೂ ವಾಸನೆಯ ಅರಿವು ನಿಮಗಾಗದಿದ್ದರೆ ಅದನ್ನು ಮರುಪಡೆಯುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಕೊರೊನಾದಿಂದ ಕಳೆದುಕೊಂಡ ವಾಸನೆ ನಷ್ಟವನ್ನು ಮರುಪಡೆಯವುದು ಹೇಗೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:
ವಾಸನೆ ಮತ್ತು ರುಚಿಯ ನಷ್ಟದ ನಿಖರವಾದ ಅರ್ಥವೇನು?:
ವಾಸನೆಯನ್ನು ಕಳೆದುಕೊಳ್ಳುವುದು ಹೊಸತೇನಲ್ಲ. ವೈರಲ್ ಜ್ವರ ಅಥವಾ ಯಾವುದಾದರೂ ಸೋಂಕಿಗೆ ತುತ್ತಾದ ನಂತರ ವಾಸನೆಯ ನಷ್ಟದ ಜೊತೆಗೆ ಮೂಗು ಸೋರುವಿಕೆ ಮತ್ತು ಇತರ ಮೂಗಿನ ಲಕ್ಷಣಗಳನ್ನು ಕಂಡಿರುತ್ತೇವೆ. ಆದರೆ ಕೊರೊನಾದ ವಿಷಯದಲ್ಲಿ ಹಾಗಲ್ಲ, ಅಲ್ಲಿ ವಾಸನೆ ಮತ್ತು ರುಚಿ ಕಳೆದುಕೊಳ್ಳುವುದು ಮೊದಲ ರೋಗಲಕ್ಷಣವಾಗಿದೆ. ವೈರಸ್ ಸುಲಭವಾಗಿ ಮೂಗಿನ ಮೂಲಕ ಹೊಕ್ಕು, ಮೂಗಿನ ಮೇಲ್ಬಾಗದಲ್ಲಿರುವ ವಾಸನೆಗೆ ಸಂಬಂಧಿಸಿದ ಸಂವೇದನಾ ಮಾಹಿತಿಯನ್ನು ಮೆದುಳಿಗೆ ತಲುಪಿಸುವ ಜವಾಬ್ದಾರಿಯನ್ನು ಹೊಂದಿರುವ ನರ ಸೇರುತ್ತದೆ. ಇದರಿಂದ ನೀವು ವಾಸನೆಯನ್ನು ಕಳೆದುಕೊಳ್ಳುವಿರಿ. ನಿಮಗೆ ವಾಸನೆ ಬರದಿದ್ದಾಗ, ದ್ರಾಕ್ಷಿ ಅಥವಾ ಚೆರ್ರಿ ನಡುವಿನ ವ್ಯತ್ಯಾಸವನ್ನು ನೀವು ಹೇಳಲು ಸಾಧ್ಯವಿಲ್ಲ, ಏಕೆಂದರೆ ಎರಡೂ ನಿಮಗೆ ಸಿಹಿಯಾಗಿರುತ್ತವೆ.
ಕೊರೊನಾ ನಂತರ ವಾಸನೆ ಮತ್ತು ರುಚಿಯನ್ನು ಮರಳಿ ಪಡೆಯುವುದು ಹೇಗೆ?
ವೈರಲ್ ಸೋಂಕಿನ ನಂತರ ವಾಸನೆ ಕಳೆದುಕೊಂಡವರು ಪದೇ ಪದೇ ಯಾವುದಾದರೂ ವಾಸನೆಯನ್ನು ತೆಗದುಕೊಳ್ಳುವುದರಿಂದ ಸುಲಭವಾಗಿ ಚೇತರಿಸಿಕೊಳ್ಳಲು ಸಹಾಯ ಆಗುವುದು ಎಂದು ವಿವಿಧ ಅಧ್ಯಯನಗಳು ಸೂಚಿಸಿವೆ. ಜರ್ನಲ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಶೇಕಡಾ 95 ರಷ್ಟು ಕೊರೊನಾ ರೋಗಿಗಳು ಆರು ತಿಂಗಳೊಳಗೆ ತಮ್ಮ ವಾಸನೆಯ ಪ್ರಜ್ಞೆಯನ್ನು ಮರಳಿ ಪಡೆಯುತ್ತಾರೆ. ಈ ವೈರಸ್ ವಾಸನೆಯ ನರ ಸರ್ಕ್ಯೂಟ್ಗಳಿಗೆ ಯಾವುದೇ ಶಾಶ್ವತ ಹಾನಿಯನ್ನುಂಟುಮಾಡುವುದಿಲ್ಲ.
ಸುಟ್ಟ ಕಿತ್ತಳೆ ತಿನ್ನುವುದು ಮತ್ತು ಸೇಬಿನಂತೆ ಈರುಳ್ಳಿಯನ್ನು ಕಚ್ಚಿ ತಿನ್ನುವುದು ಮುಂತಾದ ಆರೊಮ್ಯಾಟಿಕ್ ಆಹಾರಗಳಿಂದ ಜನರು ತಮ್ಮ ರುಚಿಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಅನೇಕ ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದು ಅಸಂಬದ್ಧವೆಂದು ತೋರಿದರೂ, ರುಚಿ-ವಾಸನೆ ಪಡೆಯುವಲ್ಲಿ ಕೆಲಸ ಮಾಡುತ್ತವೆ. ಈ ವ್ಯಾಯಾಮಗಳು ಘ್ರಾಣ ತರಬೇತಿಯಂತೆಯೇ ಕಾರ್ಯನಿರ್ವಹಿಸುತ್ತವೆ.
ಘ್ರಾಣ ತರಬೇತಿ ಎಂದರೇನು?:
ಘ್ರಾಣ ತರಬೇತಿ( ಆಲ್ಫಾಕ್ಟರಿ ಟ್ರೀನಿಂಗ್) ಅಂದರೆ ಕೊರೊನಾದಿಂದ ಚೇತರಿಕೆಯಾದ ವ್ಯಕ್ತಿ ಸುಮಾರು 12 ವಾರಗಳ ಕಾಲ ದಿನಕ್ಕೆ 2-3 ಬಾರಿ ಗುಲಾಬಿ, ನಿಂಬೆ, ಲವಂಗದಂತಹ ಸಾರಭೂತ ತೈಲಗಳ ವಾಸನೆಯನ್ನು ತೆಗೆದುಕೊಳ್ಳುವುದು ಅಥವಾ ಎಳೆಯುವುದು. ಇದರಿಂದ ಹೊಸ ನರ ಮಾರ್ಗಗಳು ರೂಪಿತವಾಗುತ್ತದೆ. ಇದರಿಂದಾಗಿ ವಾಸನೆಯ ಪ್ರಜ್ಞೆ ಚೇತರಿಕೆಯಾಗುವುದು. ಆಲ್ಫಾ-ಲಿಪೊಯಿಕ್ ಆಮ್ಲ, ವಿಟಮಿನ್ ಎ ಪೂರಕಗಳು ಮತ್ತು ಕೌಂಟರ್ ಸ್ಟೀರಾಯ್ಡ್ಗಳ ಮೂಗಿನ ದ್ರವೌಷಧಗಳು ಸಹ ವಾಸನೆ ಮರುಪಡೆಯಲು ಸಹಾಯಕವಾಗಿವೆ. ಘ್ರಾಣ ತರಬೇತಿಯನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು, ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ವಾಸನೆಯ ನರಗಳನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ.
ವಾಸನೆ ಮರುಪಡೆಯುವಿಕೆ ಸಮಯ:
ವಾಸನೆ ಚೇತರಿಕೆಯ ಸಮಯವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವು ದಿನಗಳಲ್ಲಿ ಕೆಲವರಿಗೆ ವಾಸನೆ ಹಿಂದಿರುಗಿದರೆ, ಇನ್ನೂ ಕೆಲವರಿಗೆ ಕೆಲವು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಕೊರೊನಾ ನಂತರ ವಾಸನೆ ನಷ್ಟದಿಂದ ಬಳಲುತ್ತಿರುವ ಜನರು ಪರೋಸ್ಮಿಯಾದ ಅಡ್ಡಪರಿಣಾಮವನ್ನು ಹೊಂದಿರಬಹುದು, ಅಲ್ಲಿ ಅವರ ವಾಸನೆಯ ಪ್ರಜ್ಞೆಯು ಮರಳುತ್ತದೆ ಆದರೆ ವಸ್ತುಗಳು ಅವರಿಗೆ ತುಂಬಾ ಕೆಟ್ಟದಾಗಿ ವಾಸನೆ ಬೀರುತ್ತವೆ.