ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಸೋಲು: ವಿರಾಟ್ ಕೊಹ್ಲಿ ನಾಯಕತ್ವ ಬದಲಾವಣೆಗೆ ಜೋರಾಯ್ತು ಕೂಗು

ಹೊಸದಿಲ್ಲಿ,ಜೂ.26: ಬಹು ನಿರೀಕ್ಷಿತ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್​ ಟೂರ್ನಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿರುವ ಬೆನ್ನಲ್ಲೇ ತಂಡದ ನಾಯಕತ್ವ ಬದಲಾವಣೆ ಕುರಿತು ಚರ್ಚೆ ಶುರುವಾಗಿದೆ. ಕ್ರಿಕೆಟ್​ ಪಂಡಿತರು ಸೇರಿದಂತೆ ಅಭಿಮಾನಿಗಳು ಸಹ ನಾಯಕತ್ವ ಬದಲಾವಣೆ ಬಗ್ಗೆ ತಮ್ಮದೇ ನಿಲುವು ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭಿಸಿರುವ ಕ್ರಿಕೆಟ್ ಅಭಿಮಾನಿಗಳು, ವಿರಾಟ್ ಕೋಹ್ಲಿ ಬದಲಿಗೆ ರೋಹಿತ್ ಶರ್ಮಾಗೆ ತಂಡದ ಸಾರಥ್ಯ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್, ಟೀಂ ಇಂಡಿಯಾದ ಟಿ20 ತಂಡದ ನಾಯಕತ್ವವನ್ನು ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್ ಶರ್ಮಾ ಅವರಿಗೆ ನೀಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಅವರನ್ನೇ ಮುಂದುವರಿಸಲಿ ಎಂದು ಪನೇಸರ್ ಅಭಿಪ್ರಾಯಪಟ್ಟಿದ್ದಾರೆ.

ಅಭಿಮಾನಿಗಳ ಬೇಸರ: 2014ರಿಂದ ಟೀಂ ಇಂಡಿಯಾ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ, ತಂಡಕ್ಕೆ ಉತ್ತಮ ಯಶಸ್ಸು ತಂದುಕೊಟ್ಟಿದ್ದರೂ, ತಂಡಕ್ಕೆ ಈವರೆಗೂ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ವಿರಾಟ್ ಕೊಹ್ಲಿ ಅವರ ಈ ವೈಫಲ್ಯ ಕೋಟ್ಯಾಂತರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದು, ಇದೇ ಕಾರಣಕ್ಕೆ ಕೊಹ್ಲಿ ನಾಯಕತ್ವ ಬದಲಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.

Exit mobile version