ಸರ್ಕಾರಕ್ಕೆ ಅಧಿವೇಶನ ಕರೆದರೆ ತಮ್ಮ ಬಣ್ಣ ಬಯಲಾಗುತ್ತೇ ಅನ್ನೋ ಭಯ: ಸಿದ್ದರಾಮಯ್ಯ ಕಿಡಿ

ಮೈಸೂರು, ಜು. 01: ರಾಜ್ಯ ಸರ್ಕಾರಕ್ಕೆ ಆಡಳಿತ ಪಕ್ಷಗಳ ಭಯವಿದ್ದು, ಈ ಕಾರಣದಿಂದಾಗಿ ಅಧಿವೇಶನ ಕರೆಯುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ತಮ್ಮ ಬಣ್ಣ ಬಯಲಾಗುವ ಹೆದರಿಕೆ ಇದೆ. ಜೊತೆಗೆ ವಿರೋಧ ಪಕ್ಷಗಳನ್ನು ಎದುರಿಸಲು ಆಡಳಿತ ಪಕ್ಷಕ್ಕೆ ಭಯವಿದೆ. ಹೀಗಾಗಿ ಸರ್ಕಾರ ಅಧಿವೇಶನ ಕರೆಯುತ್ತಿಲ್ಲ. ಆದರೆ ರಾಜ್ಯದಲ್ಲಿ ತುರ್ತಾಗಿ ವಿಧಾನಸಭಾ ಅಧಿವೇಶನ ಕರೆಯಬೇಕಿದೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಅಧಿವೇಶನ ಕರೆಯದೆ, ಇನ್ಯಾವ ಕಾಲದಲ್ಲಿ ಅಧಿವೇಶನ ಕರೆಯುತ್ತಾರೆ? ಎಂದು ಪ್ರಶ್ನಿಸಿದ ಅವರು, ಅಡಳಿತ ಪಕ್ಷದ ನಾಯಕರಿಗೆ ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆ ಇದ್ದರೆ ತುರ್ತಾಗಿ ಮುಂಗಾರು ಅಧಿವೇಶನ ಕರೆಯಿರಿ ಎಂದು ಆಗ್ರಹಿಸಿದರು.

ಇದೇ ವೇಳೆ ರಾಜ್ಯದಲ್ಲಿ SSLC ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ರಾಜ್ಯದ ಇವತ್ತಿನ ಪರಿಸ್ಥಿತಿಯಲ್ಲಿ SSLC ಪರೀಕ್ಷೆ ನಡೆಸಬಾರದು. PUC ಪರೀಕ್ಷೆ ರದ್ದಾದ ಮೇಲೆ SSLC ಪರೀಕ್ಷೆ ಯಾಕೆ ಮಾಡುತ್ತಿದ್ದೀರಿ?. ಸರ್ಕಾರದಲ್ಲಿ ಸಚಿವರ ನಡುವೆ ಸಮನ್ವಯದ ಕೊರತೆ ಇದೆ,
ಸಚಿವ ಸಂಪುಟ ಸಭೆ ನಡೆಸದೆ ನಿರ್ಧಾರ ಮಾಡಲಾಗಿದೆ
ಪರೀಕ್ಷೆ ನಡೆಸುವ ಬಗ್ಗೆ ಆರೋಗ್ಯ ಸಚಿವರ ಮಾಹಿತಿ ಇಲ್ಲ ಅಂದಿದ್ದಾರೆ. ಆದರೂ ಏಕೆ ಪರೀಕ್ಷೆ ನಡೆಸುತ್ತಿದ್ದಾರೆ ಗೊತ್ತಿಲ್ಲ ಎಂದು ಕಿಡಿಕಾರಿದರು.

ಲಸಿಕೆ ವಿಚಾರದಲ್ಲಿ ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ. ಲಸಿಕೆ ಸ್ಟಾಕ್ ಇದ್ದರೆ ಜನ ಏಕೆ ಲಸಿಕೆ ಪಡೆಯಲು ಕ್ಯೂ ನಿಲ್ಲುತ್ತಿದ್ದರು?
ಲಸಿಕೆಗಾಗಿ ಜನರು ಪರದಾಡುವ ಪರಿಸ್ಥಿತಿ ಇದ್ದು, ಸರ್ಕಾರಕ್ಕೆ ಲಸಿಕೆ ಪೂರೈಸಲು ಆಗುತ್ತಿಲ್ಲ. ಲಸಿಕೆ ಹಂಚಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರ ವಿಫಲವಾಗಿವೆ‌ ಎಂದು ಕಿಡಿಕಾರಿದರು.

Exit mobile version