ರಾಜ್ಯದಲ್ಲಿ ಉಲ್ಬಣಿಸಿದ ಕೊರೊನಾ ಕಂಟಕ: ರಾಜ್ಯದ 8 ಜಿಲ್ಲೆಗಳಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ

ಬೆಂಗಳೂರು, ಏ. 09: ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರಿಸುತ್ತಿರುವ ಹಿನ್ನೆಲೆ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಏ.10ರಿಂದ ರಾಜ್ಯದ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದ್ದು ಇದಕ್ಕಾಗಿ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಉಲ್ಬಣಿಸಿದ್ದು, ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ರಾಜ್ಯಸರ್ಕಾರ ಕೆಲ ಜಿಲ್ಲೆಗಳಲ್ಲಿ ನೈಟ್ ಕರ್ಪ್ಯೂ ನಿಯಮ ಜಾರಿಗೊಳಿಸಿದೆ‌. ವಿಪತ್ತು ನಿರ್ವಹಣಾ ಕಾಯ್ದೆ, 2005 ರಲ್ಲಿನ ಸೆಕ್ಷನ್ 24ರ ಅನ್ವಯ ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ ಮಣಿಪಾಲ್, ಬೀದರ್, ಕಲಬುರಗಿ ಮತ್ತು ತುಮಕೂರು ನಗರಗಳಲ್ಲಿ ಏ.10ರಿಂದ ಏ.20ರವರೆಗೆ ರಾತ್ರಿ 10.00 ಗಂಟೆಯಿಂದ ಬೆಳಗ್ಗೆ 5.00 ಗಂಟೆಯವರೆಗೆ ಕೊರೊನಾ ಕರ್ಪ್ಯೂ ಜಾರಿಗೊಳಿಸಲಾಗಿದೆ.

ಕೊರೊನಾ ಕರ್ಪ್ಯೂ ಸಂದರ್ಭದಲ್ಲಿ ಕೆಲವು ಅತ್ಯವಶ್ಯಕ ಸೇವೆಗಳಿಗೆ ಮಾತ್ರ ಅನುಮತಿ‌ ನೀಡಲಾಗಿದೆ. ಉಳಿದಂತೆ ಎಲ್ಲಾ ಸೇವೆಗಳನ್ನು / ಸಂಚಾರಗಳನ್ನು ನಿಷೇಧಿಸಲಾಗಿದೆ. ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅನುಮತಿಸಿದೆ.

ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತಹ ಕಾರ್ಖಾನೆಗಳು / ಕಂಪನಿಗಳು  ಸಂಸ್ಥೆಗಳು ಯಥಾ ರೀತಿ ಕಾರ್ಯ ನಿರ್ವಹಿಸಲು ಅನುಮತಿಸಿದೆ. ಆದರೆ, ಸಂಬಂಧಿಸಿದ ಕಾರ್ಮಿಕರು, ನೌಕರರು ಕೊರೊನಾ ಕರ್ಪ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರಿರಬೇಕು.
ವೈದ್ಯಕೀಯ ಸೇವೆ, ತುರ್ತು ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಉಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಜತೆಗೆ, ಅತ್ಯವಶ್ಯಕ ಸೇವೆಗಳನ್ನು ಒದಗಿಸುವಂತಹ ವಾಹನಗಳು, ಸರಕು ಸಾಗಾಣಿಕೆ ವಾಹನ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಅನುಮತಿ. ರಾತ್ರಿ ವೇಳೆಯಲ್ಲಿನ ಬಸ್ಸು, ರೈಲು ಹಾಗೂ ವಿಮಾನದ ದೂರ ಪ್ರಯಾಣಕ್ಕೆ ಅವಕಾಶ. ಪ್ರಯಾಣಿಕರು ಮನೆಯಿಂದ ನಿಲ್ಯಾಣಗಳಿಗೆ ಮತ್ತು ನಿಲ್ಯಾಣಗಳಿಂದ ಮನೆಗೆ ಅಧಿಕೃತ ಟಿಕೆಟ್ ಜೊತೆಗೆ ಸಂಚರಿಸಬಹುದು. ಈ ಆದೇಶವನ್ನು ಉಲ್ಲಂಘನೆ ಮಾಡುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ಹಾಗೂ ಭಾರತೀಯ ದಂಡ ಸಂಹಿತೆ ಹಾಗೂ ಇತರ ಕಾನೂನು ಉಪಬಂಧಗಳ ಅನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

Exit mobile version