ರಾಜ್ಯದಲ್ಲಿ ಹೆಚ್ಚಿದ ಕೊರೊನಾತಂಕ: ಪ್ರತಿನಿತ್ಯ 1 ಲಕ್ಷ ಪರೀಕ್ಷೆ ನಡೆಸಲು ಸರ್ಕಾರದ ಗುರಿ

ಬೆಂಗಳೂರು, ಮಾ. 17: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿರುವ ಹಿನ್ನೆಲೆಯಲ್ಲಿ, ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ರಾಜ್ಯದಲ್ಲಿ ಕೋವಿಡ್ ಪರೀಕ್ಷಾ ಗುರಿಯನ್ನು 1 ಲಕ್ಷಕ್ಕೆ ಹೆಚ್ಚಿಸಿದೆ.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಈ ಹಿಂದೆ ಆರ್​ಟಿಪಿಸಿಆರ್ ಮತ್ತು ಆರ್​ಎಟಿ ಕೋವಿಡ್-19 ಪರೀಕ್ಷೆ ನಡೆಸುವ ಗುರಿಯನ್ನು 70500ಕ್ಕೆ ಇಳಿಸಲಾಗಿತ್ತು. ಆದರೆ ಇದೀಗ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಮತ್ತು ಸರ್ಕಾರದ ಸೂಚನೆಯಂತೆ ರಾಜ್ಯದ ಒಟ್ಟು ಕೋವಿಡ್​-19 ಪರೀಕ್ಷಾ ಗುರಿಯನ್ನು 1 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಪ್ರಸ್ತುತ ಒಟ್ಟಾರೆ ಆರ್​ಟಿಪಿಸಿಆರ್ ಗುರಿಯಲ್ಲಿ ಪ್ರಾಥಮಿಕ/ಕೌಟುಂಬಿಕ ಸಂಪರ್ಕಿತರ ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲಾ ರೋಗಲಕ್ಷಣ ರಹಿತ ಪ್ರಕರಣಗಳ ಮಾದರಿಗಳನ್ನು ಪೋಲಿಂಗ್ ಮೂಲಕ ಪರೀಕ್ಷಿಸುವಂತೆ ಸೂಚಿಸುತ್ತಾ, ಪೋಲಿಂಗ್ ಮಾಡಬಹುದಾದ ಪೋಲಿಂಗ್ ಆಧಾರಿತ ಮಾದರಿ ಪರೀಕ್ಷೆಗೆ ಜಿಲ್ಲಾವಾರು ಅಂದಾಜು ಗುರಿಯನ್ನು ಹಾಗೂ ಕೋವಿಡ್ ಪ್ರಯೋಗಾಲಯಗಳ ಬದಲಾದ ಪರೀಕ್ಷಾ ಸಾಮರ್ಥ್ಯದ ಆಧಾರದ ಮೇಲೆ ಪ್ರಯೋಗಶಾಲಾ ಮ್ಯಾಪಿಂಗ್ ಅನ್ನು ಮರು ಪರೀಕ್ಷಿಸಿ ಪ್ರಯೋಗಶಾಲೆಗೆ ಮಾದರಿಗಳನ್ನು ಕಳುಹಿಸಿ ಕೋವಿಡ್-19 ಮಾದರಿ ಪರೀಕ್ಷೆಗಳನ್ನು ನಡೆಸಲು ಕ್ರಮಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

Exit mobile version