ಟಿ20 ವಿಶ್ವಕಪ್ : ಪಾಕಿಸ್ತಾನಕ್ಕೆ ಐತಿಹಾಸಿಕ ಗೆಲವು

ನವದೆಹಲಿ ಅ 25 ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ದ ಪಾಕ್ ತಂಡವು 10 ವಿಕೆಟ್ ಗಳ ಐತಿಹಾಸಿಕ ಗೆಲುವನ್ನು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಪಾಕಿಸ್ತಾನ್ ತಂಡವು ತನ್ನ ಮಾರಕ ಬೌಲಿಂಗ್ ದಾಳಿಯಿಂದಾಗಿ ಭಾರತಕ್ಕೆ ಆಘಾತ ನೀಡಿದೆ.ಪಾಕಿಸ್ತಾನದ ಪರವಾಗಿ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಶಾಹಿನ್ ಆಫ್ರಿದಿ ಭಾರತದ ಆರಂಭಿಕ ಆಟಗಾರರಾದ ಕೆ.ಎಲ್ ರಾಹುಲ್ (3) ರೋಹಿತ್ ಶರ್ಮಾ(0) ಅವರ ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನವು ಮೇಲುಗೈ ಸಾಧಿಸುವಂತೆ ಮಾಡಿದರು.

ಭಾರತದ ಪರವಾಗಿ ವಿರಾಟ್ ಕೊಹ್ಲಿ  49 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದಾಗಿ 57 ರನ್ ಗಳಿಸಿದರೆ, ರಿಶಬ್ ಪಂತ್ 30 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದಾಗಿ 39 ರನ್ ಗಳಿಸಿದರು. ಆ ಮೂಲಕ  ಭಾರತ ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು.

ಪಾಕಿಸ್ತಾನದ ಪರವಾಗಿ ಶಾಹಿನ್ ಆಫ್ರಿದಿ ಮೂರು  ಹಾಗೂ ಹಸನ್ ಅಲಿ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು.ಭಾರತ ತಂಡವು ನೀಡಿದ 152 ರನ್ ಗಳ ಗುರಿಯನ್ನು ಬೆನ್ನತ್ತಿದ ಪಾಕ್ ತಂಡವು ಮೊಹಮ್ಮದ್ ರಿಜ್ವಾನ್ (79) ಹಾಗೂ ಬಾಬರ್ ಅಜಮ್ (68) ರನ್ ಗಳ ಮೂಲಕ 17.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿಯನ್ನು ತಲುಪಿತು.

ರಾಹುಲ್ ಅನುಮಾನಸ್ಪದ ಔಟ್ :ಮೊದಲ ಓವರ್‌ನಲ್ಲೇ ಅನುಭವಿ ಓಪನರ್‌ ರೋಹಿತ್‌ ಶರ್ಮಾ ಇನ್‌ಸ್ವಿಂಗ್‌ ಎಸೆತವನ್ನು ಅರಿಯಲು ವಿಫಲರಾಗಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಬಳಿಕ 3ನೇ ಓವರ್‌ನ ಮೊದಲ ಎಸೆತದಲ್ಲಿ ಕೆಎಲ್‌ ರಾಹುಲ್‌ ಕ್ಲೀನ್‌ ಬೌಲ್ಡ್‌ ಆಗಿದ್ದರು. ಆದರೆ, ಈ ಎಸೆತ ನೋ ಬಾಲ್‌ ಆಗಿತ್ತು ಎಂಬುದು ಈಗ ಭಾರಿ ವಿವಾದ ಸೃಷ್ಟಿಸಿದೆ. ರಾಹುಲ್‌ ಔಟ್‌ ಆದ ಎಸೆತದಲ್ಲಿ ಬೌಲರ್‌ ಅಫ್ರಿದಿ ಗೆರೆ ದಾಟಿ ಚೆಂಡನ್ನು ಎಸೆದಿರುವ ಚಿತ್ರಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

ಮಿಂಚಿನ ಬೌಲಿಂಗ್‌ ದಾಳಿ ಸಂಘಟಿಸಿದ ಶಾಹೀನ್‌ ಶಾ ಅಫ್ರಿದಿ ತಮ್ಮ ಕೊನೇ ಓವರ್‌ನಲ್ಲಿ ವಿರಾಟ್‌ ಕೊಹ್ಲಿ ವಿಕೆಟ್‌ ಕೂಡ ಪಡೆದು, 4 ಓವರ್‌ಗಳಲ್ಲಿ 31ಕ್ಕೆ 3 ವಿಕೆಟ್‌ಗಳೊಂದಿಗೆ ಮ್ಯಾಚ್‌ ವಿನ್ನಿಂಗ್ ಬೌಲಿಂಗ್ ಪ್ರದರ್ಶನ ನೀಡಿದರು.

ಭಾರತದ ಬೌಲರ್ ಗಳು ಮೊದಲ ಪಂದ್ಯದಲ್ಲಿ ವಿಕೆಟ್ ಕಬಳಿಸಲು ಹೆಣಗಾಡಿದರು.ಇನ್ನೊಂದೆಡೆಗೆ ಪಾಕ್ ಪರವಾಗಿ ಶಾಹಿನ್ ಮೂರು ವಿಕೆಟ್ ಗಳನ್ನು ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Exit mobile version