ಅಫ್ಘಾನಿಸ್ತಾನ ಹಾಗೂ ಭಾರತದ ನಡುವೆ ವಿಮಾನ ಸಂಚಾರ ಆರಂಭಿಸುವಂತೆ ತಾಲಿಬಾನ್ ಮನವಿ

ನವದೆಹಲಿ ಸೆ 29 : ಅಫ್ಘಾನಿಸ್ತಾನ ಹಾಗೂ ಭಾರತದ ನಡುವೆ ವಿಮಾನ ಸಂಚಾರವನ್ನು ಆರಂಭಿಸಬೇಕೆಂದು ತಾಲಿಬಾನ್ ಸರ್ಕಾರ ಭಾರತದ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಅಫ್ಘಾನ್ ಭಾರತದ ಜೊತೆ ಸಂವಹನ ನಡೆಸಿದೆ.ಭಾರತದಲ್ಲಿ ಕೊವಿಡ್ ಹಿನ್ನೆಲೆಯಲ್ಲಿ ಅ. 31ರವರೆಗೂ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ದಾಳಿ ವೇಳೆ ಸಿಲುಕಿದ್ದ ಭಾರತೀಯರನ್ನು ಕರೆತರಲು ಭಾರತದಿಂದ ಕಾಬೂಲ್ ವಿಮಾನ ನಿಲ್ದಾಣಕ್ಕೆ ವಿಮಾನವನ್ನು ಕಳುಹಿಸಲಾಗಿತ್ತು. ಅದಾದ ಬಳಿಕ ಮತ್ತೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಅಫ್ಘಾನಿಸ್ತಾನದ ವಿಮಾನಯಾನ ಸಚಿವ ಅಲ್ಹಜ್ ಹಮೀದುಲ್ಲಾಹ ಅಖುನಾಜ್ದಾದ್ ಅಫ್ಘಾನಿಸ್ತಾನ ಹಾಗೂ ಭಾರತದ ನಡುವಿನ ವಿಮಾನ ಸಂಚಾರವನ್ನು ಮರು ಆರಂಭಿಸುವಂತೆ ಭಾರತದ ವಿಮಾನಯಾನ ಸಚಿವಾಲಯದ ನಿರ್ದೇಶಕ ಅರುಣ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ತಾಲಿಬಾನ್ ವಕ್ತಾರ ಅಬ್ದುಲ್ ಖಾಹರ್ ಬಲ್​ಕ್ಷಿ ಕೂಡ ಪ್ರತಿಕ್ರಿಯೆ ನೀಡಿದ್ದು, ಈಗ ಕಾಬೂಲ್ ವಿಮಾನ ನಿಲ್ದಾಣದಲ್ಲಿದ್ದ ತೊಂದರೆ ನಿವಾರಣೆಯಾಗಿದ್ದು, ವಿಮಾನಗಳು ಹಾರಾಟ ನಡೆಸುತ್ತಿವೆ. ಹೀಗಾಗಿ, ಭಾರತವೂ ಅಫ್ಘಾನ್​ಗೆ ವಿಮಾನ ಸಂಚಾರವನ್ನು ಆರಂಭಿಸಿದರೆ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ ಎಂದಿದ್ದಾರೆ.
ಈಗಾಗಲೇ ಅಫ್ಘಾನಿಸ್ತಾನದ ವಿಮಾನ ಸಂಸ್ಥೆಗಳಾದ ಅರಿಯಾನ ಆಫ್ಘನ್ ಏರ್​ಲೈನ್ ಮತ್ತು ಕಾಮ್ ವಿಮಾನಗಳು ಭಾರತಕ್ಕೆ ಸಂಚಾರ ನಡೆಸಲು ಸಿದ್ಧವಾಗಿವೆ.

ಇತ್ತೀಚೆಗೆ ಪಾಕಿಸ್ತಾನ ಅಫ್ಘಾನಿಸ್ತಾನಕ್ಕೆ ವಿಮಾನ ಸಂಚಾರವನ್ನು ಪುನರಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಪತ್ರ ಬರೆದಿರುವ ಅಫ್ಘಾನಿಸ್ತಾನದ ನಾಗರಿಕ ವಿಮಾನಯಾನ ಸಚಿವ ಅಲ್ಹಾಜ್ ಹಮೀದುಲ್ಲಾ ಅಖುನಾಜ್ದಾದ್, ಭಾರತ ಮತ್ತು ಅಫ್ಘಾನಿಸ್ತಾನದ ವಿಮಾನಯಾನ ಸಂಸ್ಥೆಯ ನಡುವೆ ಸುಗಮವಾದ ವೈಮಾನಿಕ ಸಂಚಾರ ನಡೆಸಬೇಕೆಂಬುದು ಈ ಪತ್ರದ ಉದ್ದೇಶ. ಭಾರತ ಅಫ್ಘಾನಿಸ್ತಾನಕ್ಕೆ ವಾಣಿಜ್ಯ ವಿಮಾನಯಾನ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಅಫ್ಘಾನಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರ ಮನವಿ ಮಾಡುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಆದರೆ, ಭಾರತದಲ್ಲಿ ಅಕ್ಟೋಬರ್ 31ರವರೆಗೂ ಅಂತಾರಾಷ್ಟ್ರೀಯ ಕಮರ್ಷಿಯಲ್ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ಕೊವಿಡ್ ಮಾತ್ರವಲ್ಲದೆ ರೂಪಾಂತರಿ ವೈರಸ್​, ನಿಫಾ ವೈರಸ್ ಹಾವಳಿಯೂ ಜಾಸ್ತಿಯಾಗಿದೆ. ಹೀಗಾಗಿ, 3ನೇ ಅಲೆಯ ಕೊರೋನಾ ಹರಡುವಿಕೆಯನ್ನು ನಿಯಂತ್ರಿಸಲು ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ವಿಧಿಸಿದ್ದ ನಿಷೇಧವನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷದಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿಷೇಧ ವಿಧಿಸಲಾಗಿದೆ. 2020ರ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ನಡುವೆ ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಹಾರಾಟವನ್ನು ಅ. 31ರವರೆಗೆ ರದ್ದುಗೊಳಿಸಲಾಗಿದೆ. ಮುಂದೆ ಭಾರತ ಯಾವ ನಿರ್ಣಯ ಕೈಗೊಳ್ಳಲಿದೆ ಎಂದು ಕಾದುನೋಡಬೇಕಿದೆ.

Exit mobile version