ಭಾರತ ಎರಡನೇ ದರ್ಜೆ ತಂಡವಲ್ಲ: ಅರ್ಜುನ್ ರಣತುಂಗಾ ಆಕ್ಷೇಪಕ್ಕೆ ಶ್ರೀಲಂಕಾ ಕ್ರಿಕೆಟ್ ಪ್ರತ್ಯುತ್ತರ

ನವದೆಹಲಿ, ಜು. 03: ಮುಂಬರುವ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಕ್ರಿಕೆಟ್ ಸರಣಿ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಕ ಅರ್ಜುನ ರಣತುಂಗ, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತದ ದ್ವಿತೀಯ ದರ್ಜೆಯ ತಂಡವನ್ನು ಕಳುಹಿಸಲಾಗಿದೆ. ಆ ಮೂಲಕ ಶ್ರೀಲಂಕಾ ಕ್ರಿಕೆಟ್ ಬಗ್ಗೆ ಅವಮಾನಿಸಲಾಗಿದೆ. ಈ ಸರಣಿ ನಡೆಸಲು ಒಪ್ಪಿಗೆ ನೀಡಿದ ಪ್ರಸಕ್ತ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ನಿರ್ಧಾರ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಿರಿಯ ಹಾಗೂ ಮಾಜಿ ಕ್ರಿಕೆಟಿಗನ ಈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಶ್ರೀಲಂಕಾ‌ ಪ್ರವಾಸಕೈಗೊಂಡಿರುವ ಟೀಂ ಇಂಡಿಯಾದ 20 ಮಂದಿ ಆಟಗಾರರಲ್ಲಿ 14 ಆಟಗಾರರು ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಭಾರತ ರಾಷ್ಟ್ರೀಯ ತಂಡವನ್ನ ಪ್ರತಿನಿಧಿಸಿದ್ದಾರೆ. ಹೀಗಾಗಿ ಈ ತಂಡವನ್ನು ದ್ವಿತೀಯ ದರ್ಜೆ ತಂಡ ಎಂದು ಹೇಳಲು ಸಾಧ್ಯವಿಲ್ಲ ಎಂದು ಅರ್ಜುನ ರಣತುಂಗಾ ಹೇಳಿಕೆಗೆ ಟಾಂಗ್ ನೀಡಿದೆ.

ಉಭಯ ತಂಡಗಳ ನಡುವಿನ ಸೀಮಿತ ಓವರ್ಗಳ ಕ್ರಿಕೆಟ್ ಸರಣಿ ಜುಲೈ 13ರಿಂದ ಆರಂಭವಾಗಲಿದ್ದು, ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳಲ್ಲಿ ಎರಡು ತಂಡಗಳು ಮುಖಾಮುಖಿಯಾಗಲಿವೆ. ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಆಟಗಾರರ ಮತ್ತೊಂದು ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಹಿರಿಯ ಆಟಗಾರ ಶಿಖರ್ ಧವನ್ ನಾಯಕತ್ವದ 20 ಮಂದಿ ಯುವ ಆಟಗಾರರ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳಹಿಸಲಾಗಿದೆ.

Exit mobile version