ಭಾರತಕ್ಕೆ ಗವಿ ಮೈತ್ರಿಕೂಟದಿಂದ ಸಬ್ಸಿಡಿ ರೂಪದಲ್ಲಿ 2.5 ಕೋಟಿ ಡೋಸ್ ಲಸಿಕೆಯ ನೆರವು

ನವದೆಹಲಿ, ಮೇ. 11: ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ಲಸಿಕೆ ಪೂರೈಸುತ್ತಿರುವ ಗವಿ ಮೈತ್ರಿಕೂಟದಿಂದ ಭಾರತಕ್ಕೆ ಕೊರೊನಾ ಲಸಿಕೆಯ ನೆರವು ದೊರೆಯಲಿದೆ. ಗವಿ ಎಂಬುದು ಒಂದು ಅಂತಾರಾಷ್ಟ್ರೀಯ ಲಸಿಕೆ ಮೈತ್ರಿಕೂಟವಾಗಿದೆ. ಮಾರಣಾಂತಿಕ ರೋಗಗಳಿಂದ, ಬಡರಾಷ್ಟ್ರಗಳ ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡುವ ಕಾರ್ಯಕ್ರಮವೇ ಗವಿ. ಇದು ಮೂಲತಃ ಒಂದು ಸ್ವಯಂಸೇವಾ ಸಂಸ್ಥೆ. ಆದರೆ, ಇದು ವಿಶ್ವ ಆರೋಗ್ಯ ಸಂಸ್ಥೆಯ ಜತೆಗೆ ಕಾರ್ಯನಿರ್ವಹಿಸುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಬ್ಯಾಂಕ್, ಯುನಿಸೆಫ್, ಲಸಿಕೆ ತಯಾರಿಕಾ ಕಂಪನಿಗಳು, ಲಸಿಕೆ ಅಭಿವೃದ್ಧಿ ಸಂಸ್ಥೆಗಳು, ಲಸಿಕೆ ದಾನ ನೀಡುವ ದೇಶಗಳು, ಬಿಲ್‌ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಹಾಗೂ ಹಲವು ಎನ್‌ಜಿಒಗಳ ಸಹಯೋಗದಲ್ಲಿ ಕೆಲಸ ಮಾಡುತ್ತದೆ.

ಭಾರತದ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿರುವ ಗವಿ‌ ಮೈತ್ರಿಕೂಟ ಭಾರತಕ್ಕೆ 2.5 ಕೋಟಿ ಡೋಸ್ ಲಸಿಕೆಯನ್ನು ಸಬ್ಸಿಡಿ ದರದಲ್ಲಿ ಪೂರೈಸುವುದಾಗಿ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗವಿ ಮೈತ್ರಿಕೂಟದ ವಕ್ತಾರರು ಭಾರತಕ್ಕೆ ಲಸಿಕೆ ವಿತರಿಸುವುದಕ್ಕೆ ಕೋವ್ಯಾಕ್ಸ್ ಮಂಡಳಿಯ ಒಪ್ಪಿಗೆ ಸಿಕ್ಕಿದ್ದು, ತಕ್ಷಣವೇ ಸಬ್ಸಿಡಿ ದರದಲ್ಲಿ 2.5 ಕೋಟಿ ಡೋಸ್ ಲಸಿಕೆ ಹಾಗೂ ಆರ್ಥಿಕ ಸಹಾಯವನ್ನೂ ನೀಡುವುದಾಗಿ ಹೇಳಿದ್ದಾರೆ.

Exit mobile version