ಮುಂಬೈ, ಜೂ. 11: ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಕ್ರಿಕೆಟ್ ಪಂದ್ಯಾವಳಿಗೆ ಭಾರತ ತಂಡ ಪ್ರಕಟವಾಗಿದ್ದು, ಶಿಖರ್ ಧವನ್ ನಾಯಕತ್ವದಲ್ಲಿ ಲಂಕಾ ಪ್ರವಾಸ ಕೈಗೊಂಡಿರುವ ತಂಡದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ಹೊಸ ಆಟಗಾರರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಜುಲೈ ತಿಂಗಳಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಅನುಭವಿ ಆಟಗಾರ ಶಿಖರ್ ಧವನ್ ಗೆ ನಾಯಕತ್ವ ನೀಡಲಾಗಿದ್ದು, ಭುವನೇಶ್ವರ್ ಕುಮಾರ್ ಅವರನ್ನು ತಂಡದ ಉಪ ನಾಯಕನನ್ನಾಗಿ ನೇಮಿಸಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಂಡವನ್ನು ಪ್ರಕಟಿಸಿದೆ.
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚಿರುವ ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್ ಜೊತೆಗೆ ಐಪಿಎಲ್‍ನಲ್ಲಿ ಅಬ್ಬರಿಸಿದ್ದ ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ನಿತೀಶ್ ರಾಣಾ, ರಾಹುಲ್ ಚಹರ್, ಚೇತನ್ ಸಕಾರಿಯಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಆಲ್‍ರೌಂಡರ್ ಕೃಷ್ಣಪ್ಪ ಗೌತಮ್, ಸ್ಪಿನ್ನರ್ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ವೇಗಿ ನವದೀಪ್ ಸೈನಿ ಕೂಡ ತಂಡದಲ್ಲಿದ್ದಾರೆ.