ಇಂದು ಭಾರತ vs ಶ್ರೀಲಂಕಾ ಎರಡನೇ ಟಿ20 ಕದನ: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ; ಕಮ್ ಬ್ಯಾಕ್ ಮಾಡುವತ್ತ ಲಂಕಾ ಚಿತ್ತ

ಕೊಲಂಬೊ ಜು 27: ಪ್ರವಾಸಿ ಭಾರತ ಹಾಗೂ ಅತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯ ಇಂದು(ಮಂಗಳವಾರ) ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭಾರತ, ಇಂದಿನ ಪಂದ್ಯದಲ್ಲೂ ಗೆಲುವು ಸಾಧಿಸಿ ಸರಣಿ ಗೆಲುವಿನ ನಿರೀಕ್ಷೆ ಹೊಂದಿದ್ದರೆ. ಅತಿಥೇಯ ಶ್ರೀಲಂಕಾ ಇಂದಿನ ಪಂದ್ಯವನ್ನು ಗೆದ್ದು ಸರಣಿ ಜೀವಂತವಿರಿಸುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಉಭಯ ತಂಡಗಳ ನಡುವಿನ ಇಂದಿನ ಪಂದ್ಯದ ಹಣಾಹಣಿ ಅತ್ಯಂತ ರೋಚಕವಾಗಿರಲಿದೆ.

ಮೊದಲ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ್ದ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿತ್ತು. ಗೆಲುವಿನ ಅಲೆಯಲ್ಲಿರುವ ಟೀಂ ಇಂಡಿಯಾ ಇಂದಿನ ಪಂದ್ಯಕ್ಕೂ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಮತ್ತೊಂದೆಡೆ ಏಕದಿನ ಸರಣಿ ಸೋಲಿನ ಜೊತೆಗೆ ಮೊದಲ ಟಿ20 ಪಂದ್ಯದಲ್ಲೂ ಸೋಲು ಕಂಡಿರುವ ಶ್ರೀಲಂಕಾ ತನ್ನೆಲ್ಲಾ ತಪ್ಪನ್ನು ಸರಿಪಡಿಸಿಕೊಂಡು ಮೈದಾನಕ್ಕಿಳಿಯಬೇಕಿದೆ. ಮೊದಲ ಪಂದ್ಯದಲ್ಲಿ ಲಂಕಾ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದರೂ, ಭಾರತ ನೀಡಿದ ಸವಾಲು ಬೆನ್ನತ್ತುವಲ್ಲಿ ವೈಫಲ್ಯ ಅನುಭವಿಸುವ ಮೂಲಕ ಸೋಲಿನ ಕಹಿ ಅನುಭವಿಸಿತು. ಹೀಗಾಗಿ ಇಂದಿನ ಪಂದ್ಯವನ್ನು ಗೆದ್ದು ಕಮ್ ಬ್ಯಾಕ್ ಮಾಡುವ ನಿರೀಕ್ಷೆ ಹೊಂದಿರುವ ಲಂಕಾ, ಇದಕ್ಕಾಗಿ ಸಾಕಷ್ಟು ಕಸರತ್ತು ನಡೆಸಬೇಕಿದೆ.

ಪಂದ್ಯದ ಸಮಯ : ರಾತ್ರಿ 8ಕ್ಕೆ
ಸ್ಥಳ: ಪ್ರೇಮದಾಸ ಕ್ರೀಡಾಂಗಣ

Exit mobile version