ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷ ಕುಸ್ತಿಪಟುಗಳು ಪ್ರಾಬಲ್ಯ: ರವಿ ದಹಿಯಾ ಹಾಗೂ ದೀಪಕ್ ಪುನಿಯಾ ಸೆಮಿ ಫೈನಲ್​ಗೆ ಪ್ರವೇಶ

ಟೋಕಿಯೋ, ಜು. 04: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷ ಕುಸ್ತಿಪಟುಗಳು ಪ್ರಾಬಲ್ಯ ಮೆರೆದಿದ್ದು, ರವಿ ದಹಿಯಾ ಹಾಗೂ ದೀಪಕ್ ಪುನಿಯಾ ಸೆಮಿ ಫೈನಲ್​ಗೆ ಪ್ರವೇಶಿಸುವ ಮೂಲಕ ಪದಕದ ಆಸೆ ಮೂಡಿಸಿದ್ದಾರೆ. 

ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್‌ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಅರ್ಬಾನೊ ಟೈಗರೋಸ್ ಎದುರು 13-2 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ ರವಿಕುಮಾರ್ ದಹಿಯಾ, ಆ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ನಂತರ ನಡೆದ ಕ್ವಾರ್ಟರ್ ಫೈನಲ್​ನಲ್ಲಿ ಬಲ್ಜೆರಿಯಾದ ಜಾರ್ಗೀ ವಂಗೆಲೊವ್ ಎದುರು 14-4 ಅಂಕಗಳ ಅಂತರದಲ್ಲಿ ಅಮೋಘ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಪುರುಷರ 86 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಭಾರತದ ಮತ್ತೊಬ್ಬ ಕುಸ್ತಿಪಟು ದೀಪಕ್‌ ಪುನಿಯಾ, ನೈಜೀರಿಯಾದ ಅಗಿಮೋರ್ ಎದುರು 12-1 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇವರು ಚೀನಾದ ಝಶೆನ್ ಲಿನ್ ಅವರನ್ನು 6-3 ಅಂಕಗಳ ಅಂತರದಿಂದ ಸೋಲಿಸಿ ಕೊನೇಯ ಕ್ಷಣದಲ್ಲಿ ಗೆಲುವು ಸಾಧಿಸಿ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ.

Exit mobile version