ರೈಲಿನಲ್ಲಿ ಈ ತಪ್ಪುಗಳನ್ನು ಮಾಡುವುದು ಶಿಕ್ಷಾರ್ಹ ಅಪರಾಧ

ನವದೆಹಲಿ ಅ 27 : ನೀವೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಖಂಡಿತಾ ರೈಲ್ವೇ ನೀಡುವ ಎಚ್ಚರಿಕೆಯನ್ನು ತಿಳಿಯಿರಿ. ರೈಲು ಪ್ರಯಾಣದ ಬಗ್ಗೆ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಸುರಕ್ಷತೆಗಾಗಿ ರೈಲ್ವೆ ಈ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಬ್ಬ ಹರಿದಿನಗಳಲ್ಲಿ ರೈಲಿನಲ್ಲಿ ಜನಸಂದಣಿ ಹೆಚ್ಚಿರುತ್ತದೆ. ರೈಲಿನಲ್ಲಿ ಬೆಂಕಿ ಅಥವಾ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೈಲ್ವೇ ಪ್ರಯಾಣಿಕರಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. 

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ರೈಲ್ವೆ ಇಲಾಖೆಯು ಮಾಹಿತಿ ಹಂಚಿಕೊಂಡಿದ್ದು, ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಯಾವುದೇ ರೀತಿಯ ಸುಡುವ ವಸ್ತುಗಳನ್ನು ಹೊತ್ತೊಯ್ಯಬಾರದು. ಈ ನಿಯಮವನ್ನು ಅನುಸರಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಂತಹ ಪ್ರಯಾಣಿಕರಿಗೆ ದಂಡ ವಿಧಿಸುವುದರ ಜೊತೆಗೆ ಜೈಲು ಶಿಕ್ಷೆಗೂ ಗುರಿಪಡಿಸಬಹುದು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.

ಪಶ್ಚಿಮ ಸೆಂಟ್ರಲ್ ರೈಲ್ವೇ ಪ್ರಕಾರ, ರೈಲಿನಲ್ಲಿ ಬೆಂಕಿಯನ್ನು ಹರಡುವುದು ಅಥವಾ ದಹಿಸುವ ವಸ್ತುಗಳನ್ನು ಸಾಗಿಸುವುದು ರೈಲ್ವೇ ಕಾಯಿದೆ, 1989 ರ ಸೆಕ್ಷನ್ 164 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.

ಇದರ ಅಡಿಯಲ್ಲಿ, ರೈಲು ಪ್ರಯಾಣದ ವೇಳೆ ಸುಡುವ ವಸ್ತುಗಳೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಸಾವಿರ ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಹಾಗಾಗಿ ಸೀಮೆಎಣ್ಣೆ, ಪೆಟ್ರೋಲ್, ಪಟಾಕಿ ಮತ್ತು ಗ್ಯಾಸ್ ಸಿಲಿಂಡರ್‌ಗಳಂತಹ ಸುಡುವ ವಸ್ತುಗಳನ್ನು ಕೊಂಡೊಯ್ಯಬೇಡಿ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ ಅವುಗಳನ್ನು ಸಾಗಿಸಲು ಯಾರಿಗೂ ಅನುಮತಿಸಬೇಡಿ, ಅದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ರೈಲ್ವೆ ತಿಳಿಸಿದೆ.

ರೈಲ್ವೆ ಪ್ರಯಾಣದ ವೇಳೆ ಇವುಗಳು ನಿಷಿದ್ಧ:
ರೈಲ್ವೇಯ ಟ್ವೀಟ್ ಪ್ರಕಾರ, ಈಗ ಪ್ರಯಾಣಿಕರು ಸೀಮೆಎಣ್ಣೆ, ಒಣ ಹುಲ್ಲು, ಒಲೆ, ಪೆಟ್ರೋಲ್,  ಗ್ಯಾಸ್ ಸಿಲಿಂಡರ್, ಬೆಂಕಿಕಡ್ಡಿಗಳು, ಪಟಾಕಿ ಅಥವಾ ರೈಲು ವಿಭಾಗದಲ್ಲಿ ಬೆಂಕಿ ಹರಡುವ ಯಾವುದೇ ವಸ್ತುವಿನೊಂದಿಗೆ ಪ್ರಯಾಣಿಸುವಂತಿಲ್ಲ. ಪ್ರಯಾಣಿಕರ ಪ್ರಯಾಣವನ್ನು ಸುರಕ್ಷಿತವಾಗಿಸಲು ರೈಲ್ವೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.

ರೈಲ್ವೆ ಆವರಣದಲ್ಲಿ ಧೂಮಪಾನ ಮಾಡುವುದು ಅಪರಾಧ :
ಇದಲ್ಲದೇ, ಬೆಂಕಿ ಅನಾಹುತಗಳನ್ನು ನಿಯಂತ್ರಿಸಲು ರೈಲ್ವೆ ಮಾಡಿರುವ ಯೋಜನೆಯಡಿ, ರೈಲಿನಲ್ಲಿ ಧೂಮಪಾನ ಮಾಡುವವರು ಸಿಕ್ಕಿಬಿದ್ದರೆ, ಅವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಇದಲ್ಲದೆ, ದಂಡವನ್ನು ಸಹ ಪಾವತಿಸಬೇಕಾಗಬಹುದು. ರೈಲ್ವೆ ಆವರಣದಲ್ಲಿ ಸಿಗರೇಟ್/ಬೀಡಿ ಸೇದುವುದು ಕೂಡ ಶಿಕ್ಷಾರ್ಹ ಅಪರಾಧ.

Exit mobile version