ಭಾರತದ ಕ್ರೀಡಾ ದಿಗ್ಗಜ, ಹಿರಿಯ ಅಥ್ಲೆಟ್‌ ಮಿಲ್ಖಾ ಸಿಂಗ್ ಅವರಿಗೆ ಕೊರೊನಾ ಸೋಂಕು

ಹೊಸದಿಲ್ಲಿ, ಮೇ. 20: ಭಾರತೀಯ ಕ್ರೀಡಾ ಲೋಕದ‌ ದಂತಕಥೆ, ಹಿರಿಯ ಅಥ್ಲಿಟ್ ಮಿಲ್ಖಾ ಸಿಂಗ್ ಅವರಿಗೆ ಕೊರೊನಾ‌ ಸೋಂಕು ದೃಢಪಟ್ಟಿದ್ದು, ಅವರು ಚಂಡೀಗರದಲ್ಲಿರುವ ತಮ್ಮ‌ ನಿವಾಸದಲ್ಲಿ ಹೋಂ‌ ಐಸೋಲೇಷನ್ ಆಗಿದ್ದಾರೆ.

ಮಿಲ್ಖಾ ಸಿಂಗ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿದ್ದು, ಇದರ ಬೆನ್ನಲ್ಲೇ ತಮಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದು ಅಚ್ಚರಿ ಮೂಡಿಸಿದೆ ಎಂದು ಮಿಲ್ಖಾ ಸಿಂಗ್ ತಿಳಿಸಿದ್ದಾರೆ.

ತಾವು ಆರೋಗ್ಯವಾಗಿದ್ದು,‌ ಯಾವುದೇ ರೀತಿಯ ಜ್ವರ ಅಥವಾ ಕೆಮ್ಮು ಕಾಣಿಸಿಲ್ಲ. ಮುಂದಿನ ಮೂರ್ನಾಲ್ಕು ದಿನದಲ್ಲಿ ತಾವು ಗುಣಮುಖ ಆಗುವುದಾಗಿ ತಮ್ಮ ವೈದ್ಯರು ತಿಳಿಸಿದ್ದಾರೆ. ನಿನ್ನೆ ಸಹ ತಾವು ಜಾಗಿಂಗ್ ಮಾಡಿದ್ದು, ಅತ್ಯಂತ ಆತ್ಮವಿಶ್ವಾಸದಿಂದಿರುವುದಾಗಿ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

91 ವರ್ಷದ ದಿಗ್ಗಜ ಅಥ್ಲೆಟ್ ಮಿಲ್ಖಾ ಸಿಂಗ್, ಏಷ್ಯನ್ ಕ್ರೀಡಾಕೂಟದಲ್ಲಿ ಐದು ಬಾರಿ ಚಿನ್ನದ ಪದಕ ಪಡೆದಿದ್ದಾರೆ. 1960ರ‌ ಒಲಂಪಿಕ್ಸ್ ಕ್ರೀಡಾಕೂಟದ 400 ಮೀಟರ್ ಫೈನಲ್ಸ್ ನಲ್ಲಿ 4ನೇ ಸ್ಥಾನ ಪಡೆದಿದ್ದು, ಮಿಲ್ಖಾ ಸಿಂಗ್ ಅವರ ಕ್ರೀಡಾ ಜೀವನದ ಅವಿಸ್ಮರಣೀಯ ಸನ್ಮಿವೇಶವಾಗಿದೆ.

Exit mobile version