4ನೇ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಹಾಗೂ 25 ರನ್‌ಗಳ ಜಯ: ಸರಣಿ ಗೆದ್ದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್‌ಗೆ ಎಂಟ್ರಿ

ಅಹಮದಾಬಾದ್, ಮಾ. 06: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಾಂಘಿಕ ಪ್ರದರ್ಶನ ನೀಡುವ ಮೂಲಕ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಹಾಗೂ 25 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ 4 ಪಂದ್ಯಗಳ ಸರಣಿಯನ್ನು 3-1ರ ಅಂತರದಲ್ಲಿ ಗೆದ್ದು ಬೀಗಿದ ಕೊಹ್ಲಿ ಪಡೆ, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್‌ ಫೈನಲ್‌ ಪ್ರವೇಶಿಸಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಪರಿಣಾಮ ನಾಲ್ಕನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ಇಂಗ್ಲೆಂಡ್, 135 ರನ್ ಗಳಿಗೆ ಇಂಗ್ಲೆಂಡ್ ತಂಡ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಭಾರತದೆದುರು ಸೋಲೊಪ್ಪಿಕೊಂಡಿತು. ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಅಕ್ಸರ್ ಪಟೇಲ್(48ಕ್ಕೆ 5) ಹಾಗೂ ಆರ್.ಅಶ್ವಿನ್(47ಕ್ಕೆ 5) ಇಂಗ್ಲೆಂಡ್ ಬ್ಯಾಟ್ಸಮನ್ಗಳಿಗೆ ಕಡಿವಾಣ ಹಾಕುವ ಮೂಲಕ ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ಟರು.

ಇದಕ್ಕೂ ಮುನ್ನ 7 ವಿಕೆಟ್ ನಷ್ಟಕ್ಕೆ 294 ರನ್‌ಗಳಿಂದ 3ನೇ ದಿನದಾಟ ಆರಂಭಿಸಿದ ಭಾರತಕ್ಕೆ ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಆಸರೆಯಾದರು. ಇವರಿಬ್ಬರೂ ಎಂಟನೇ ವಿಕೆಟ್​ಗೆ 106 ರನ್ ಜೊತೆಯಾಟದಲ್ಲಿ ಭಾಗಿಯಾಗಿ ಭಾರತಕ್ಕೆ ಒಳ್ಳೆಯ ಮುನ್ನಡೆ ತಂದುಕೊಟ್ಟರು. ಅಕ್ಷರ್ ಪಟೇಲ್ ಔಟಾಗುತ್ತಿದ್ದಂತೆಯೇ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಶೂನ್ಯ ಸಂಪಾದನೆ ಮಾಡಿ ಪೆವಿಲಿನ್​ಗೆ ಮರಳಿದರು. ವಾಷಿಂಗ್ಟನ್ ಸುಂದರ್ 96 ರನ್ ಗಳಿಸಿ ಅಜೇಯರಾಗಿ ಉಳಿದರು.

ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಜುಗಲ್ ಬಂದಿಯ ಮಾರಕ ಬೌಲಿಂಗ್ ಗೆ ತತ್ತರಿಸಿದ ಇಂಗ್ಲೆಂಡ್ ದಾಂಡಿಗರು ಪೆವಿಲಿಯನ್ ಪರೇಡ್ ನಡೆಸಿದರು. ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಜೋಡಿ ಇಂಗ್ಲೆಂಡ್ ಬ್ಯಾಟಿಂಗ್ ಬಲನೀಡುವ ವಿಶ್ವಾಸ ಮೂಡಿಸಿತ್ತಾದರೂ, ಈ ಹಂತದಲ್ಲಿ ದಾಳಿಗಿಳಿದ ಅಕ್ಷರ್ ಪಟೇಲ್ 2 ರನ್ ಗಳಿಸಿದ್ದ ಬೆನ್ ಸ್ಟೋಕ್ಸ್ ರನ್ನು ಪೆವಿಲಿಯನ್ ಗೆ ಅಟ್ಟಿದರು. ಬಳಿಕ ಕ್ರೀಸ್ ಗೆ ಬಂದ ಡೇನಿಯಲ್ ಲಾರೆನ್ಸ್ ಭಾರತೀಯ ಬೌಲರ್ ಗಳ ಮಾರಕ ಬೌಲಿಂಗ್ ಗೆ ಪ್ರತಿರೋಧವೊಡ್ಡಲು ಯತ್ನಿಸಿದರಾದರೂ 50 ರನ್ ಗಳಿಸಿದ್ದಾಗ ಅಶ್ವಿನ್ ಬೌಲಿಂಗ್ ದಾಳಿಗೆ ಬಲಿಯಾಗಿ ಪೆವಿಲಿಯನ್ ಗೆ ನಡೆದರು. ಈ ಬಳಿಕ ಭಾರತದ ಗೆಲುವಿನ ಹಾದಿ ಸುಗಮವಾಯಿತು.

ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಿಷಭ್ ಪಂತ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಇಡೀ ಸರಣಿಯುದ್ದಕ್ಕೂ ಅಮೋಘ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಹೊಸ ದಾಖಲೆ ಬರೆದ ರವಿಚಂದ್ರನ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ಗೆಲುವಿನೊಂದಿಗೆ ಇದೀಗ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಜೂನ್‌ 18ರಿಂದ 22ರವರೆಗೆ ನಡೆಯಲಿರುವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಶಸ್ತಿಗಾಗಿ ನ್ಯೂಜಿಲೆಂಡ್‌ ಜತೆ ಕಾದಾಡಲಿದೆ. 

Exit mobile version